ಉದಯವಾಹಿನಿ, ಬೀದರ್: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಸಹೋದರ ಅಮರಕುಮಾರ ಖಂಡ್ರೆಯವರ ಪೆನಾಲ್ ಜಯಭೇರಿ ಗಳಿಸಿದೆ.
ಬ್ಯಾಂಕಿನ ಆಡಳಿತ ಮಂಡಳಿಯ ಒಟ್ಟು 15 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.ಅದರಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ ಪೆನಾಲ್‍ನ ಮೂವರು ಚುನಾವಣೆಗೂ ಮುನ್ನವೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಬುಧವಾರ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಖಂಡ್ರೆ ಪೆನಾಲ್‍ನ ಎಂಟು ಜನ ಆಯ್ಕೆಯಾದರು. ಇದರೊಂದಿಗೆ ಡಿಸಿಸಿ ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಖಂಡ್ರೆ ಪರಿವಾರದ ಕೈಗೆ ಬಂದಂತಾಗಿದೆ. ಇನ್ನು, ಉಮಾಕಾಂತ ಹಾಗೂ ಕಿಶನರಾವ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.ಅಮರಕುಮಾರ ಖಂಡ್ರೆಯವರ ಬೆನ್ನಿಗೆ ಅವರ ಸಹೋದರ, ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಉಮಾಕಾಂತ ಅವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೆಂಬಲ ಸೂಚಿಸಿದ್ದರು. ಇದರಿಂದ ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗಿತ್ತು. ಮತದಾನಕ್ಕೂ ಪೂರ್ವದಲ್ಲಿ ಪರಸ್ಪರ ಕೆಸರೆರಚಾಟ, ವೈಯಕ್ತಿಕ ಟೀಕೆ ಟಿಪ್ಪಣಿಗಳು ಕೂಡ ನಡೆದಿದ್ದವು. ಸಹಜವಾಗಿಯೇ ಎಲ್ಲರ ಗಮನ ಚುನಾವಣೆಯತ್ತ ಸೆಳೆದಿತ್ತು. ಆದರೆ, ಅಂತಿಮವಾಗಿ ಖಂಡ್ರೆ ಪೆನಾಲ್ ಜಯಗಳಿಸಿ ಜಿಲ್ಲೆಯ ರಾಜಕೀಯದಲ್ಲಿ ಮೇಲುಗೈ ಸಾಧಿಸಿದೆ. ಸಹಕಾರ ಕ್ಷೇತ್ರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!