ಉದಯವಾಹಿನಿ, ಹೈದರಾಬಾದ್: ಕರ್ನಾಟಕದಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳನ್ನು ಪ್ರಕಟಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷ ಇದೀಗ ನೆರೆಯ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲು ೬ ಗ್ಯಾರೆಂಟಿಗಳನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಕಟಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ, ಗೃಹಜ್ಯೋತಿ, ರಾಜ್ಯ ಆರೋಗ್ಯಶ್ರೀ, ಯುವ ವಿಕಾಸಂ, ರೈತ ಭರೋಸಾ ಹಾಗು ಇಂದಿರಾ ಅಮ್ಮ ಇಂಡ್ಲೂ ಸೇರಿ ೬ ಗ್ಯಾರೆಂಟಿಗಳನ್ನು ರಾಜ್ಯದ ಎಲ್ಲಾ ಜನರಿಗೆ ನೀಡುವುದಾಗಿ ಅವರು ಘೋಷಿಸಿದ್ದಾರೆ. ತೆಲಂಗಾಣದ ಸಂಗಾರೆಡ್ಡಿಯಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ನವಂಬರ್ ೩೦ ರಂದು ತೆಲಂಗಾಣದ ೧೧೯ ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರ ಜನ ಮನಗೆಲ್ಲುವುದು ನಮ್ಮ ಉದ್ದೇಶ. ನುಡಿದಂತೆ ನಡೆಯುತ್ತೇವೆ. ಈಗಾಗಲೇ ಕರ್ನಾಟಕದಲ್ಲಿ ಘೋಷಿಸಿದ ಐದು ಗ್ಯಾರೆಂಟಿಗಳಲ್ಲಿ ೪ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಸದ್ಯದಲ್ಲಿಯೇ ಐದನೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದಾರೆ.
