ಉದಯವಾಹಿನಿ, ಹೊಸಪೇಟೆ : ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷಗಳನ್ನು ಪೂರೈಸಿದ್ದು, ಈ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು.
ಹೊಸಪೇಟೆಯ ಅಮರಾವತಿ ನಗರದಲ್ಲಿ ಗುರುವಾರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡದ ಲೋಕಾರ್ಪಣೆ ಹಾಗೂ ಬಾಲಕಿಯರ ಪ್ರೌಢಶಾಲೆ, ಮುನಿಸಿಪಲ್ ಬಾಲಕಿಯರ ಪ್ರೌಢಶಾಲೆ, ನಗರ ಗ್ರಂಥಾಲಯ, ಜಿಲ್ಲಾ ಕೃಷಿ ಭವನ ಮತ್ತು ಸಮಗ್ರ ಕೃಷಿ ಪದ್ಧತಿಯ ಉತ್ಕೃಷ್ಟ ಕೇಂದ್ರದ ಕಟ್ಟಡಗಳ ಉದ್ಘಾಟನೆ ನೆರವೇರಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕರ್ನಾಟಕ ಸುವರ್ಣ ಸಂಭ್ರಮವನ್ನು ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮುಂದಿನ ವರ್ಷ ನವಂಬರ್ 1ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹೊಸಪೇಟೆಯಲ್ಲಿ ಒಟ್ಟು ರೂ. 36 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ದೊರೆತಿದೆ. ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡವು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಇದರಿಂದ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 2.5 ರಿಂದ 3 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಎಲ್ಲಾ ಸೌಕರ್ಯಗಳನ್ನು ಒದಗಿಸುವಂತಹ ಕೆಲಸ ಕೆ.ಕೆ.ಆರ್.ಡಿ.ಬಿ. ಯಿಂದಾಗಿದೆ. ವಿಜಯನಗರಕ್ಕೆ ಮಹಿಳಾ ಪದವಿ ಕಾಲೇಜು ಮತ್ತು ಮಹಿಳಾ ಪೊಲೀಸ್ ಠಾಣೆಯ ಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
