ಉದಯವಾಹಿನಿ, ಹಾವೇರಿ : ಜಿಲ್ಲೆಯಲ್ಲಿ ತ್ರಿವಳಿ ಕೊಲೆ ನಡೆದಿದೆ. ಅಣ್ಣನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಮೈದುನ ಪರಾರಿಯಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಕೊಲೆಗೀಡಾದವರನ್ನು ಗೀತಾ ಮರಿಗೌಡ್ರು(32) ಅಕುಲ್(10) ಮತ್ತು ಅಂಕಿತಾ(7) ಎಂದು ಗುರುತಿಸಲಾಗಿದೆ. ಕುಮಾರಗೌಡ್ ಮರಿಗೌಡ್ರು ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಕುಮಾರ್ಗೌಡ್ ತನ್ನ ಸ್ವಂತ ಅಣ್ಣ ಹೊನ್ನೇಗೌಡರ ಹೆಂಡತಿ ಮತ್ತು ಮಕ್ಕಳ ಹತ್ಯೆಗೈದು ಪರಾರಿಯಾಗಿದ್ದಾನೆ. ಕೊಲೆಯಾದ ಗೀತಾ ಅವರ ಗಂಡ ಹೊನ್ನೇಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಹೊನ್ನೇಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಹಾನಗಲ್ನಲ್ಲಿ ಅಣ್ಣ ಹೊನ್ನೇಗೌಡರ ವ್ಯವಹಾರವನ್ನು ತಮ್ಮ ಕುಮಾರ ನೋಡಿಕೊಳ್ಳುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಊರಿಗೆ ಆಗಮಿಸಿದ್ದ ಅಣ್ಣ ಹೊನ್ನೇಗೌಡ ಇನ್ಮುಂದೆ ವ್ಯವಹಾರವನ್ನು ತನ್ನ ಪತ್ನಿ ಗೀತಾ ಹೆಸರಲ್ಲಿ ನಡೆಸುವಂತೆ ತಮ್ಮನಿಗೆ ತಿಳಿಸಿದ್ದರು. ವಹಿವಾಟು ತಮ್ಮನ ಬದಲು ಪತ್ನಿಯೇ ಹೆಸರಲ್ಲಿ ನಡೆಸು ಎಂದು ಹೇಳಿದ್ದಕ್ಕೆ ಬೇಸತ್ತ ಕುಮಾರಗೌಡ ಅಣ್ಣನ ಪತ್ನಿ ಮತ್ತು ಮಕ್ಕಳನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.ದುಬೈನಲ್ಲಿರುವ ಹೊನ್ನೇಗೌಡ ಸಾಕಷ್ಟು ಹಣ ಮಾಡಿದ್ದು, ಇಷ್ಟು ದಿನ ತಮ್ಮನ ಖಾತೆಯಲ್ಲಿ ವಹಿವಾಟು ನಡೆಸಿದ್ದರು. ಈ ವರ್ಷದಿಂದ ಅತ್ತಿಗೆ ಖಾತೆಯಲ್ಲಿ ಲೆಕ್ಕ ನಿರ್ವಹಿಸುವಂತೆ ತಮ್ಮನಿಗೆ ತಿಳಿಸಿದ್ದರಿಂದ ಕುಪಿತನಾದ ತಮ್ಮ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಕುಮಾರಗೌಡ ಬಂಧನಕ್ಕೆ ವಿಶೇಷ ತಂಡ ರಚಿಸಿರುವುದಾಗಿ ತಿಳಿಸಿದರು. ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್ಪಿ ತಿಳಿಸಿದರು. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
