ಉದಯವಾಹಿನಿ, ಕೋಲಾರ: ಕಾಡು ಪ್ರಾಣಿಗಳ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಸಾವಿಗೀಡಾದ ಘಟನೆ ಕೋಲಾರದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 2 ಚಿರತೆಗಳು ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಕಾಡು ಪ್ರಾಣಿಗಳನ್ನು ಬೇಟೆಯಾಡುವವರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಚಿಕ್ಕದಾನವಹಳ್ಳಿಯಲ್ಲಿ ಉರುಳಿಗೆ ಸಿಲುಕಿ ಚಿರತೆ ಸಾವು:ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಚಿಕ್ಕದಾನವಹಳ್ಳಿ ಗ್ರಾಮದ ಬಳಿ ಗುರುವಾರ ರಾತ್ರಿ ಕಾಡುಪ್ರಾಣಿಗಳಿಗೆ ಅಂದ್ರೆ ಕಾಡು ಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿಕೊಂಡು ಚಿರತೆಯೊಂದು ಗಂಭೀರ ಗಾಯಗೊಂಡು ಸಾವನ್ನಪ್ಪಿದೆ. ಉರುಳಿಗೆ ಸಿಲುಕಿದ ಚಿರತೆಯ ಜೀವ ಉಳಿಸಲು ಸತತ 8 ಗಂಟೆ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ಸಂರಕ್ಷಣಾ ಕಾರ್ಯಾಚರಣೆ ಮಾಡಿದರೂ ಅದು ಸಫಲವಾಗಿಲ್ಲ. ಬೆಳೆಗಳನ್ನು ಕಾಡು ಹಂದಿಗಳಿಂದ ರಕ್ಷಣೆ ಮಾಡಿಕೊಳ್ಳಲು ರೈತರು ಹಾಕಿದ್ದ ಬಲೆಯಲ್ಲಿ ಚಿರತೆ ಸಿಲುಕಿಕೊಂಡಿತು. ಕಳೆದ ರಾತ್ರಿಯಿಡಿ ಡಿಎಫ್‌ಒ ಏಡುಕೊಂಡಲ ನೇತೃತ್ವದಲ್ಲಿ ಚಿರತೆ ಸಂರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಆದರೆ, ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲು ಎಷ್ಟೇ ಪ್ರಯತ್ನಿಸಿದರೂ ಚಿರತೆಯನ್ನೂ ಮಾತ್ರ ರಕ್ಷಿಸಿಕೊಳ್ಳಲಾಗಲಿಲ್ಲ.
ಬನ್ನೇರುಘಟ್ಟದಿಂದ ಹತ್ತು ಜನರ ತಂಡ:ತೀವ್ರ ಗಾಯಗೊಂಡಿದ್ದ ಚಿರತೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಬನ್ನೇರುಘಟ್ಟದಿಂದ ಹತ್ತು ಜನರ ತಂಡ ಕರೆ ತರಲಾಗಿತ್ತು. ಬಲೆಗೆ ಸಿಲುಕಿ ಚಿರತೆ ಒದ್ದಾಡಿದ ಪರಿಣಾಮ ಹಿಂಬದಿಯ ಕಾಲುಗಳು ಸ್ವಾಧೀನ ಕಳೆದುಕೊಂಡು, ಸೊಂಟದಿಂದ ಕೆಳಕ್ಕೆ ರಕ್ತ ಸಂಚಲನ ಆಗದಿದ್ದರಿಂದ ಚಿರತೆ ಪ್ರಾಣ ಬಿಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
