ಉದಯವಾಹಿನಿ, ಹಾಸನ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಅವರೊಂದಿಗೆ ಶುಕ್ರವಾರ ಸಂಜೆ ಹಾಸನಾಂಬೆ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ದೇಗುಲದ ಆಡಳಿತಾಧಿಕಾರಿ ಮಾರುತಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶುಭ ಶುಕ್ರವಾರ ತಾಯಿ ಹಾಸನಾಂಬೆ ದರ್ಶನಕ್ಕೆ ನಾನು ನನ್ನ ಕುಟುಂಬ ಸಮೇತ ಬಂದಿದ್ದೇನೆ. ದೇವಿ ಒಳ್ಳೆಯ ಮಳೆ ಬಂದು ಶಾಂತಿ, ನೆಮ್ಮದಿ ಕೊಡುತ್ತಿದ್ದಾಳೆ’ ಎಂದರು.
ದಸರಾ ಬಹಳ ವಿಜೃಂಭಣೆಯಿಂದ ಮಾಡಿದ್ದೇವೆ. ಹಾಸನದಲ್ಲೂ ಉತ್ತಮವಾಗಿ ಹಾಸನಾಂಬೆ ದೇವಿಗೆ ಅಲಂಕಾರ ಮಾಡಿದ್ದಾರೆ. ತಾಯಿ ರಾಜ್ಯದ ಜನತೆಗೆ ನೆಮ್ಮದಿ, ಸುಖ, ಶಾಂತಿ ಕೊಡಲಿ ಎಂದು ಸರ್ಕಾರದ ಪರವಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಹಿಂದೆಯೂ ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದೆ. ಹಾಗೆಯೇ ಇಂದು ಕೂಡ ಬಂದಿದ್ದೇನೆ. ರಾಜ್ಯದ ಜನತೆಗೆ ಐಶ್ವರ್ಯ, ವ್ಯವಸಾಯ, ಸಮೃದ್ದಿ ಕೊಡಲಿ. ರಾಜ್ಯದ ಜನತೆಗೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.ರಾಜಕಾರಣದ ಬಗ್ಗೆ ಮಾತನಾಡಲು ನಿರಾಕರಿಸಿದ ಡಿ.ಕೆ. ಶಿವಕುಮಾರ್, ‘ಇದು ರಾಜಕೀಯ ಮಾತನಾಡುವ ಸ್ಥಳವಲ್ಲ. ಬೇರೆ ಕಡೆ ಮಾತನಾಡೋಣ’ ಎಂದರು.
