ಉದಯವಾಹಿನಿ, ರಾಣೆಬೆನ್ನೂರು: ಇಲ್ಲಿನ ನಗರಸಭೆ ಅಮೃತ ಸಿಟಿ ಯೋಜನೆಗೆ ಒಳಪಟ್ಟರೂ ಇಲ್ಲಿನ ನಾಲ್ಕನೇ ವಾರ್ಡ್‌ಗೆ ಸಂಬಂಧಿಸಿದ ಅಡವಿ ಆಂಜನೇಯ ಬಡಾವಣೆ ನಿವಾಸಿಗಳು ಮಾತ್ರ ತೊಂದರೆ ಅನುಭವಿಸುವುದು ತಪ್ಪಿಲ್ಲ.ಅಡವಿ ಆಂಜನೇಯ ಬಡಾವಣೆ ನಗರದಿಂದ 5 ಕಿ.ಮೀ. ಅಂತರದಲ್ಲಿದೆ. ಇಲ್ಲಿ ಬಹುತೇಕರು ಕೂಲಿ ಕಾರ್ಮಿಕರು, ಶಿಳ್ಳಿಕ್ಯಾತರು, ಬುಡಕಟ್ಟು ಜನಾಂಗದವರು, ರಾಮಕುಂಡಾಡಿಗರು, ಅಂಧ ಅಂಗವಿಕಲರು, ಬಡವರು ಸೇರಿದಂತೆ 200ಕ್ಕೂ ಹೆಚ್ಚು ಕುಟುಂಬಗಳಿಂದ 5 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.
ಮಳೆಗಾಲ ಬಂದರೆ ಇಲ್ಲಿನ ಬಡಾವಣೆ ನಿವಾಸಿಗಳಲ್ಲಿ ನಡುಕ ಹುಟ್ಟುತ್ತದೆ. ಅಡವಿ ಅಂಜನೇಯ ಬಡಾವಣೆಯಿಂದ ಪಟ್ಟಣಕ್ಕೆ ತೆರಳಲು ಬಸ್ ಸೌಲಭ್ಯವಿಲ್ಲ. ದಾರಿಯಲ್ಲಿ ದೊಡ್ಡ ಕೆರೆ ಕೋಡಿ ಬಿದ್ದು ಹರಿಯುವುವಾಗ ದಿನಗಟ್ಟಲೇ ಸಂಪರ್ಕ ಕಡಿದುಕೊಳ್ಳುವ ಭೀತಿ ಉಂಟಾಗುತ್ತದೆ. ಪ್ರತಿ ಸಲ ವಾಹನ ಸಂಚಾರ ಬಂದ್ ಆಗಿ ಸಂಚಾರಕ್ಕೆ ಅನಾನುಕೂಲವಾಗುತ್ತದೆ. ಪಟ್ಟಣಕ್ಕೆ ಹೋಗದಿದ್ದರೆ ಅಂದು ಉಪವಾಸವೇ ಗತಿ. ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲಿ ಕೂಡುವಂತಾಗುತ್ತದೆ. ‘ಸ್ಟೇಶನರಿ ಸಾಮಾನು, ಟಿಕಳಿ, ತಬಲಾ, ಡಬ್ಬಾ, ಕಸಬರಗಿ, ಸೂಜಿ, ಪಿನ್ನ, ಕೂದಲು, ಚಾಪೆ, ಬಾಂಡೆ ಸಾಮಾನು ಮಾರಿ ಜೀವನ ನಡೆಸುತ್ತೇವೆ. ಮಳೆಗಾಲದ ರಸ್ತೆ ಸಂಪರ್ಕದ ಈ ಸಮಸ್ಯೆ ನಿವಾರಣೆಗೆ ದೊಡ್ಡ ಕೆರೆ ಕೋಡಿ ಬೀಳುವ ರಸ್ತೆಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಬೇಕು.
