ಉದಯವಾಹಿನಿ, ಹಿರೇಕೆರೂರು: ತಾಲ್ಲೂಕಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದ್ದು, ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಕೆರೆ-ಕಟ್ಟೆಗಳ ಏರಿ ಮೇಲೆ ಮತ್ತು ಅಕ್ಕಪಕ್ಕ ಹಾದು ಹೋಗುವ ರಸ್ತೆಗಳಲ್ಲಿ ಸುರಕ್ಷತಾ ತಡೆಗೋಡೆಗಳಿಲ್ಲದ ಕಾರಣ ಚಾಲಕರು ಹಾಗೂ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡುವಂತಾಗಿದೆ.ಪಟ್ಟಣದ-ದುರ್ಗಾದೇವಿ ಕೆರೆ ಏರಿ ರಸ್ತೆ ಬದಿ ತಡೆಗೋಡೆ ಇಲ್ಲ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮಾರ್ಗ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಪಟ್ಟಣದ ಹೊರವಲಯದಲ್ಲಿ ಇರುವ ದುರ್ಗಾದೇವಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ವಾಹನಗಳಲ್ಲಿ ಬರುತ್ತಾರೆ. ದೇವಸ್ಥಾನದ ಪಕ್ಕದಲ್ಲಿ ಇರುವ ಕೆರೆಗೆ ಯಾವುದೇ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿಲ್ಲ. ಕೆರೆ ಸುಮಾರು 543 ಎಕರೆ ವಿಸ್ತೀರ್ಣವಿದೆ. ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಕೆರೆ ತುಂಬಿದೆ.ಈ ಮಾರ್ಗವಾಗಿ ಪ್ರಯಾಣ ಮಾಡುವ ವಾಹನ ಸವಾರರು ಆತಂಕದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ರಾತ್ರಿ ವೇಳೆಯಂತೂ ವಾಹನ ಸವಾರರು ಏರಿ ಮೇಲೆ ಭಯದಿಂದಲೇ ಓಡಾಡುವಂತಾಗಿದೆ. ತಡೆಗೋಡೆ ಇಲ್ಲದ ಕಾರಣಕ್ಕೆ ಕೆರೆ ಏರಿಯ ಮೇಲೆ ಕೆಲವು ಅಪಘಾತಗಳು ಸಂಭವಿಸಿವೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
