ಉದಯವಾಹಿನಿ, ಬೆಂಗಳೂರು: ಬರೆದ ಸಾಲುಗಳೆಲ್ಲವೂ ಕಾವ್ಯವೆನಿಸುವುದಿಲ್ಲ. ಛಂದೋಬದ್ಧವಾದ, ವ್ಯಾಕರಣ ಶುದ್ಧವಾದ ಕಾವ್ಯ ರಚನೆಗೆ ಕಾವ್ಯ ಶಾಸ್ತ್ರಜ್ಞರಿಂದ ತರಬೇತಿ ಅತ್ಯಗತ್ಯ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ. ಎನ್. ಶಾಸ್ತ್ರಿ ಹೇಳಿದ್ದಾರೆ. ನಗರದಲ್ಲಿಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕಾವ್ಯ ರಚನೆ ಕುರಿತು ತರಬೇತಿ ನೀಡಲು ಆಯೋಜಿಸಿದ್ದ “ಸಂಸ್ಕೃತ ಕಾವ್ಯ ಶಾಲಾ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಈ ವಿಶ್ವವೇ ಭಗವಂತನ ಕಾವ್ಯ. ಕಾವ್ಯ ರಚನೆಗೆ ಸಾಮರ್ಥ್ಯ, ನೈಪುಣ್ಯ ಇರಬೇಕು. ಜೊತೆಗೆ ತಜ್ಞರಿಂದ ಅಭ್ಯಾಸವು ಕೂಡ ಮುಖ್ಯ.. ಈ ಹಿಂದೆಯೂ ಕೂಡ ತರಬೇತಿಯನ್ನು ಪಡೆದು ಅನೇಕರು ಉತ್ತಮ ಕವಿಗಳಾಗಿದ್ದಾರೆ. ಆದ್ದರಿಂದ ಇಂತಹ ಕಾವ್ಯ ಶಾಲೆಗಳ ಆಯೋಜನೆಯ ಮೂಲಕ ಸಂಸ್ಕೃತ ಕಾವ್ಯ ರಚನೆಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.

ಹಿರಿಯ ವಿದ್ವಾಂಸ ಡಾ. ಎಚ್. ವಿ. ನಾಗರಾಜ ರಾವ್ ಮಾತನಾಡಿ, “ಕವಿತ್ವದ ಅಂಶ ಮನುಷ್ಯರಲ್ಲಿಯೂ ಇರುವುದರಿಂದ ಅವರು ಕವಿಗಳು. ಕವಿತ್ವವು ಜನ್ಮತಃ ಬಂದಿರಲಿ ಅಥವಾ ಇಲ್ಲದಿರಲಿ ಪ್ರಯತ್ನ ಮತ್ತು ಅಭ್ಯಾಸದಿಂದ ಉತ್ತಮ ಕವಿಗಳಾಗಬಹುದು. ಛಂದಸ್ಸು, ಅಲಂಕಾರ ವ್ಯಾಕರಣಗಳ ಅಧ್ಯಯನ ಹಾಗೂ ತಜ್ಞರ ಉಪದೇಶವನ್ನು ಶ್ರದ್ದೆಯಿಂದ ಕೇಳಬೇಕು. ಕೇಳಿದ್ದನ್ನು ಮನನ ಮಾಡಬೇಕು. ಆ ಮೂಲಕ ಪ್ರಾವೀಣ್ಯವನ್ನು ಸಾಧಿಸಬೇಕು” ಎಂದು ಕಿವಿಮಾತು ಹೇಳಿದರು. ಕುಲಪತಿ ಡಾ. ಅಹಲ್ಯ ಎಸ್. ಮಾತನಾಡಿ, “ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಹಾಗೂ ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನ ಹಾಗೂ ಇತರ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಅನೇಕ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದಿಂದ ಹಮ್ಮಿಕೊಳ್ಳಲಾಗುವುದು” ಎಂದರು.

Leave a Reply

Your email address will not be published. Required fields are marked *

error: Content is protected !!