ಉದಯವಾಹಿನಿ, ಭೋಪಾಲ್: ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಇಬ್ಬರು ಪೊಲೀಸರ ಮೇಲೆ ವಾಹನ ಹರಿಸಿ ಪಾರಾರಿಯಾಗಲು ಯತ್ನಿಸಿದ್ದ ಕಾಂಗ್ರೆಸ್ ಶಾಸಕಿಯ ಪುತ್ರನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಜೋಬತ್‌ನ ಕಾಂಗ್ರೆಸ್ ಶಾಸಕಿ ಸೇನಾ ಪಟೇಲ್ ಪುತ್ರ ಪುಷ್ಪರಾಜ್ ಸಿಂಗ್ ಸದ್ಯ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.ಅಲಿರಾಜ್‌ಪುರ ಬಸ್ ನಿಲ್ದಾಣದ ಬಳಿ ನೋಂದಣಿ ಫಲಕವಿಲ್ಲದೆ ವೇಗವಾಗಿ ಚಲಿಸುತ್ತಿದ್ದ ಎಸ್‌ಯುವಿಯನ್ನು ತಡೆಯಲು ಇಬ್ಬರು ಕಾನ್‌ಸ್ಟೆಬಲ್‌ಗಳು ಪ್ರಯತ್ನಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯ ಈ ಹಿಂದೆ ವೈರಲ್ ಆಗಿತ್ತು. ಎಸ್‌ಯುವಿಯನ್ನು ಚಲಾಯಿಸುತ್ತಿದ್ದ ಪುಷ್ಪರಾಜ್ ಸಿಂಗ್ ವೇಗವನ್ನು ಹೆಚ್ಚಿಸಿ ಪೊಲೀಸರಿಗೆ ಗುದ್ದಲು ಯತ್ನಿಸಿದ್ದ. ಇದು ಕೂಡ ವಿಡಿಯೊದಲ್ಲಿ ಕಂಡು ಬಂದಿತ್ತು.ಈ ವೇಳೆ ಇಬ್ಬರು ಕಾನ್‌ಸ್ಟೆಬಲ್‌ಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ವೇಗವಾಗಿ ಸಾಗಿದ್ದ ಕಾರು ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಕಾನ್‌ಸ್ಟೆಬಲ್ ಪೈಕಿ ರಾಕೇಶ್ ಗುಜಾರಿಯಾ ಗಾಯಗೊಂಡಿದ್ದು, ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನ್‌ಸ್ಟೆಬಲ್‌ಗಳ ಹೇಳಿಕೆಯ ಆದಾರದ ಮೇಲೆ ಪುಷ್ಪರಾಜ್ ಸಿಂಗ್‌ನನ್ನು ಗುರುತಿಸಲಾಗಿದೆ.
