ಉದಯವಾಹಿನಿ, ರಾಜ್ಯದ ಜನಪ್ರಿಯ ರಾಜಕಾರಣಿ ಜನಾರ್ದನ ರೆಡ್ಡಿಯ ಪುತ್ರ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ ‘ಜೂನಿಯರ್’ ಇದೇ ಶುಕ್ರವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾ ನೋಡಿದವರೆಲ್ಲ ಕಿರೀಟಿ ರೆಡ್ಡಿಯ ನೃತ್ಯ ಪ್ರತಿಭೆಯನ್ನು ಮಾತ್ರ ತಪ್ಪದೆ ಹೊಗಳಿದ್ದಾರೆ. ಡ್ಯಾನ್ಸ್ ಹಾಗೂ ಆಕ್ಷನ್ ದೃಶ್ಯಗಳನ್ನು ಕಿರೀಟಿ ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ ಎಂಬ ಸಾಮೂಹಿಕ ಪ್ರಶಂಸೆ ಕಿರೀಟಿ ರೆಡ್ಡಿಗೆ ವ್ಯಕ್ತವಾಗಿದೆ.
ಕಿರೀಟಿಯ ‘ಜೂನಿಯರ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ತೆಲುಗಿನ ಹಲವು ಕಲಾವಿದರನ್ನು ಸಹ ಬಳಸಿಕೊಳ್ಳಲಾಗಿದೆ. ‘ಜೂನಿಯರ್’ ಸಿನಿಮಾ ತೆಲುಗು ರಾಜ್ಯಗಳಲ್ಲಿಯೂ ಸಹ ಅದ್ಧೂರಿಯಾಗಿಯೇ ಬಿಡುಗಡೆ ಆಗಿದ್ದು, ತೆಲುಗಿನ ಪ್ರೇಕ್ಷಕರು ಸಹ ‘ಜೂನಿಯರ್’ ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅಲ್ಲಿಯೂ ಸಹ ಕಿರೀಟಿಯ ಡ್ಯಾನ್ಸ್ ಮತ್ತು ಆಕ್ಷನ್ ಅನ್ನು ಮೆಚ್ಚಿಕೊಂಡಿದ್ದಾರೆ. ತೆಲುಗು ಪ್ರೇಕ್ಷಕರು ಒಂದು ಹೆಜ್ಜೆ ಮುಂದೆ ಹೋಗಿ ಜೂ ಎನ್ಟಿಆರ್ ಜೊತೆಗೆ ಕಿರೀಟಿ ರೆಡ್ಡಿಯನ್ನು ಹೋಲಿಕೆ ಮಾಡಿದ್ದಾರೆ. ‘ಜೂನಿಯರ್’ ಸಿನಿಮಾದ ವೈರಲ್ ವೈಯ್ಯಾರಿ ಹಾಡಿಗೆ ಕಿರೀಟಿ ರೆಡ್ಡಿ ಹಾಕಿರುವ ಸ್ಟೆಪ್ಪುಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ತೆಲುಗು ಸಿನಿಮಾ ಪ್ರೇಕ್ಷಕರು, ‘ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾನೆ ಈ ಯುವಕ, ಈ ಯುವಕನ್ನು ನೋಡುತ್ತಿದ್ದರೆ ಜೂ ಎನ್ಟಿಆರ್ ನೆನಪು ಬರುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಕಿರೀಟಿ ರೆಡ್ಡಿಯ ಡ್ಯಾನ್ಸ್ ಅನ್ನು ಕೊಂಡಾಡಿ ಹಲವಾರು ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
