ಉದಯವಾಹಿನಿ, ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯದವರನ್ನು ಚುನಾವಣಾ ಪ್ರಕ್ರಿಯೆಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ದೆಹಲಿಯಲ್ಲಿ ವಾರ್ಷಿಕ ಕಾನೂನು ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಕೆಲವು ಕ್ರಮಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮತದಾನದ ಹಕ್ಕನ್ನು ನಿರಾಕರಿಸುವಂತಿವೆ ಎಂದು ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ ಕೆಲವು ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ. ಇದು ಜನಾಂಗೀಯ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಕ್ರಮವಾಗಿದೆ ಎಂದು ಹೇಳಿದರು.
ಮತದಾರರ ಪಟ್ಟಿಯ ನೋಂದಣಿ ಮತ್ತು ತಿದ್ದುಪಡಿ ಪ್ರಕ್ರಿಯೆಯಲ್ಲಿ ತಾರತಮ್ಯದ ನೀತಿಗಳನ್ನು ಅನುಸರಿಸಲಾಗುತ್ತಿದೆ, ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಕೊರತೆ ಇದೆ ಎಂದು ದೂರಿರುವ ಅವರು, ಈ ಕ್ರಮಗಳಿಂದ ದೇಶದ ಚುನಾವಣಾ ವ್ಯವಸ್ಥೆ ಮೇಲಿನ ನಂಬಿಕೆ ಕುಸಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನ ಒಂದು ಪುಸ್ತಕ ಅಲ್ಲ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮ, ಎಲ್ಲರಿಗೂ ಅಧಿಕಾರ ನೀಡುವ ಶಕ್ತಿ ಹೊಂದಿದೆ. ಆದರೆ ಸಂವಿಧಾನ ಈಗ ಅಪಾಯದಲ್ಲಿದೆ. ಅಧಿಕಾರದಲ್ಲಿರುವ ನಾಯಕರು ಸಂವಿಧಾನ ಬದಲಿಸುವ ಉದ್ದೇಶ ಹೊಂದಿದ್ದಾರೆ. ಸಮಾಜವಾದ, ಜಾತ್ಯತೀತವಾದ ಪದ ಪೀಠಿಕೆಯಿಂದ ಬದಲಿಸುವ ಉದ್ದೇಶ ಬಿಜೆಪಿ, ಆರ್‌ಎಸ್‌ಎಸ್ ಹೊಂದಿದೆ. ಆದರೆ ಅವರಿಗೆ ದೇಶದ ಜನರು ಲೋಕಸಭೆ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. ಇದರ ಕ್ರೆಡಿಟ್ ರಾಹುಲ್ ಗಾಂಧಿ (Rahul Gandhi) ಅವರಿಗೆ ನೀಡಬೇಕು ಎಂದರು.
