ಉದಯವಾಹಿನಿ, ನವದೆಹಲಿ: ಮಹಿಳೆಯೊಬ್ಬರು ರಾಪಿಡೋ ಸವಾರನ ವಿಡಿಯೊವನ್ನು ಚಿತ್ರೀಕರಿಸಿ ಆತನ ಬಗ್ಗೆ ಬಾಡಿ ಶೇಮಿಂಗ್ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾಳೆ. ಇದು ನೆಟ್ಟಿಗರಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ. ಮಹಿಳೆಯೊಬ್ಬಳು ರಾಪಿಡೊ ಬೈಕ್ ಬುಕ್ ಮಾಡಿದ್ದಳು. ತಾನು ಬುಕ್ ಮಾಡಿದ್ದ ಸ್ಥಳಕ್ಕೆ ಬೈಕ್ ಸವಾರ ಆಗಮಿಸಿದ್ದಾನೆ. ಇದರ ವಿಡಿಯೊ ಚಿತ್ರೀಕರಿಸಿದ ಮಹಿಳೆ, ಆ ಸವಾರನು ಎಲ್ಲಾ ಜಾಗವನ್ನು ಆಕ್ರಮಿಸಿಕೊಂಡಿದ್ದಾನೆ. ತಾನೆಲ್ಲಿ ಕುಳಿತುಕೊಳ್ಳಲಿ ಎಂದು ಹಾಸ್ಯ ಮಾಡಿದ್ದಾಳೆ. ಅಲ್ಲದೆ ತನಗೆ ಸ್ಥಳವಿಲ್ಲದ ಕಾರಣ ತನ್ನ ರಾಪಿಡೋ ಸವಾರಿಯನ್ನು ರದ್ದುಗೊಳಿಸಬೇಕಾಯಿತು ಎಂದು ಆಕೆ ತಿಳಿಸಿದ್ದಾಳೆ. ಸವಾರಿಯನ್ನು ರದ್ದುಗೊಳಿಸಿದ ನಂತರ, ಮಹಿಳೆ ಸವಾರನನ್ನು ರಹಸ್ಯವಾಗಿ ಚಿತ್ರೀಕರಿಸಿ ವಿಡಿಯೊದಲ್ಲಿ ಅಣಕಿಸಿದ್ದಾಳೆ.
ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆ ಹಂಚಿಕೊಂಡಿದ್ದಾಳೆ. ಇದು ಸಮುದ್ರದ ಅಲೆಗಳಷ್ಟೇ ವೇಗವಾಗಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಮಹಿಳೆಯ ವಿರುದ್ಧ ಕಿಡಿಕಾರಿದ್ದಾರೆ. ಸವಾರನ ಅನುಮತಿಯಿಲ್ಲದೆ ವಿಡಿಯೊ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಮಹಿಳೆಯನ್ನು ಟೀಕಿಸಿದ್ದಾರೆ. ರಾಪಿಡೋ ಸವಾರನ ವಿಡಿಯೊ ಚಿತ್ರೀಕರಿಸುವಾಗ, ಮಹಿಳೆ ಅವನನ್ನು ಅಪಹಾಸ್ಯ ಮಾಡಿದ್ದಾಳೆ. ಆತನ ದೇಹದ ಬಗ್ಗೆ ತಮಾಷೆ ಮಾಡಿದ್ದಾಳೆ. ಅವಳು ಸವಾರನನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದಾಳೆ ಎಂದು ವಿವರಿಸಿದಳು. ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಹಿಳೆಗೆ ಭಾರಿ ವಿರೋಧ ವ್ಯಕ್ತವಾಗಿದೆ.
