ಉದಯವಾಹಿನಿ, ಮುಂಬಯಿ: ಭ್ರಾತೃತ್ವ ಬೆಸೆಯುವ ಹಬ್ಬ ರಕ್ಷಾಬಂಧನವನ್ನು ಸಂಭ್ರಮ ಸಡಗರದಿಂದ ದೇಶಾದ್ಯಂತ ಆಚರಿಸಲಾಗಿತ್ತು. ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರು ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಜತೆ ರಕ್ಷಾಬಂಧನ ಆಚರಿಸಿದರು. ಜನೈ ಭೋಸ್ಲೆ ಅವರು ಸಿರಾಜ್‌ಗೆ ರಕ್ಷೆ ಕಟ್ಟುವ ಮೂಲಕ ಭ್ರಾತೃತ್ವ ಸಂಬಂಧ ಸಾರುತ್ತ ಹಬ್ಬದ ಶುಭಾಶಯ ಕೋರಿದರು. ಜತೆಗೆ ಬ್ರಾಸ್ ಲೈಟ್ ಉಡುಗೊರೆಯಾಗಿ ನೀಡಿದರು. ಈ ಸುಂದರ ಕ್ಷಣದ ವಿಡಿಯೊವನ್ನು ಸಿರಾಜ್ ಮತ್ತು ಜನೈ ಭೋಸ್ಲೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದಾರೆ.ಇದೇ ವರ್ಷದ ಆರಂಭದಲ್ಲಿ ಜನೈ ಭೋಸ್ಲೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ವೇಳೆ ಅವರು ಸಿರಾಜ್ ಜತೆಗಿರುವ ಫೋಟೊವನ್ನು ಕೂಡ ಹಂಚಿಕೊಂಡಿದ್ದರು. ಈ ಫೋಟೊ ಕಂಡ ನೆಟ್ಟಿಗರು ಸಿರಾಜ್ , ಜನೈ ಭೋಸ್ಲೆ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕಮೆಂಟ್ ಹಾಕಿ, ಆ ವಿಷಯವನ್ನು ಕ್ಷಣಮಾತ್ರದಲ್ಲಿ ವೈರಲ್ ಮಾಡಿದ್ದರು.
ಖಾಸಗಿ ಜೀವನಕ್ಕೆ ತೊಂದರೆ ಮಾಡುವಂತ ಸುದ್ದಿಗಳು ತೀವ್ರ ಚರ್ಚೆಯಾಗುತ್ತಿದ್ದಂತೆ ಸಿರಾಜ್, ಇದೆಲ್ಲ ಸುಳ್ಳು ಎಂದಿದ್ದರು. ಯಾವ ಫೋಟೋವನ್ನು ನೆಟ್ಟಿಗರು ಮುಂದಿಟ್ಟು ವದಂತಿಗಳನ್ನು ಹಬ್ಬಿಸುತ್ತಿದ್ದರೋ ಅದೇ ಫೋಟೋವನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದ ಜನೈ ಭೋಸ್ಲೆ, ಸಿರಾಜ್ ನನ್ನ ಪ್ರೀತಿಯ ಸಹೋದರ ಎಂದು ಹೇಳಿದ್ದರು.
