ಉದಯವಾಹಿನಿ, ಕೋಲ್ಕತಾ: ಅಂಗಡಿಯೊಂದರೊಳಗೆ ತಹೇವಾರಿ ಸಿಹಿ ತಿಂಡಿಗಳ ಮೇಲೆ ಇಲಿಯೊಂದು ಮುಕ್ತವಾಗಿ ಓಡಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋಲ್ಕತಾದ ಸೀಲ್ಡಾ ರೈಲು ನಿಲ್ದಾಣದ ಜನಪ್ರಿಯ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಇದು ಹಲವರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯು ಪ್ರಯಾಣಿಕರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಜತೆಗೆ ಸೋಂಕು ಹರಡುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳು ರೈಲ್ವೆಯ ಆಹಾರ ಸುರಕ್ಷತಾ ಮಾನದಂಡಗಳನ್ನು ಟೀಕಿಸಿವೆ. ಹಾಗೆಯೇ ಅಂಗಡಿ ಮಾಲೀಕರ ನಿರ್ಲಕ್ಷ್ಯವನ್ನು ನೆಟ್ಟಿಗರು ಖಂಡಿಸಿದ್ದಾರೆ.
ಕೋಲ್ಕತಾದ ಸೀಲ್ಡಾ ರೈಲು ನಿಲ್ದಾಣದಲ್ಲಿರುವ ಹಳೆಯ ಅಂಗಡಿಯೊಂದರ ಕ್ಲೋಸ್-ಅಪ್ ದೃಶ್ಯಾವಳಿಗಳನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಅಂಗಡಿಯು ವಿವಿಧ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದರೂ, ಆಹಾರವನ್ನು ಬಹಿರಂಗವಾಗಿ ಪ್ರದರ್ಶಿಸಲಾದ ಕೌಂಟರ್‌ನಾದ್ಯಂತ ಇಲಿ ಮುಕ್ತವಾಗಿ ಸುತ್ತಾಡುತ್ತಿರುವುದು ತಕ್ಷಣವೇ ಗ್ರಾಹಕರ ಗಮನ ಸೆಳೆದಿದೆ. ಆಹಾರದ ಟ್ರೇಗಳ ಮೇಲೆ ಇಲಿಗಳು ಓಡಾಡುತ್ತಿರುವ ದೃಶ್ಯವು ಆತಂಕಕಾರಿಯಾಗಿದೆ. ದೃಶ್ಯಗಳಲ್ಲಿ ಯಾವುದೇ ಅಂಗಡಿ ಸಿಬ್ಬಂದಿ ಇಲಿಯನ್ನು ಓಡಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿಲ್ಲ. ವರದಿಗಳ ಪ್ರಕಾರ, ರೈಲ್ವೆ ಇಲಾಖೆಯು ದೂರು ದಾಖಲಿಸಲಾಗಿದೆ ಮತ್ತು ಅಂಗಡಿಯ ಮಾಲೀಕರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದೆ.
