ಉದಯವಾಹಿನಿ, ಲಖನೌ: ಕಳವಿನ ಶಂಕೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಫತೇಪುರದ ದಲಿತ ಯುವಕ ಹರಿಓಮ್ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ರಾಯ್‌ಬರೇಲಿಯ ಉಂಚಹಾರ್ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ. ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ಮೃತ ಯುವಕ ಸಾಯುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರನ್ನು ಪದೇ ಪದೆ ಉಲ್ಲೇಖಿಸಿದ್ದಾನೆ.
ಘಟನೆ ನಡೆದ ಕೆಲವು ದಿನಗಳ ನಂತರ, ರಾಹುಲ್ ಗಾಂಧಿಯು ಕೊಲೆಯಾದ ದುರ್ದೈವಿ ಹರಿಓಂ ಅವರ ತಂದೆಯೊಂದಿಗೆ ಮಾತನಾಡಿ ಸಹಾಯದ ಭರವಸೆ ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ಈ ಘಟನೆಯ ವಿಡಿಯೊವನ್ನು ಹಂಚಿಕೊಂಡಿದೆ.
ರಾಯ್‌ಬರೇಲಿಯಲ್ಲಿ ದಲಿತ ಯುವಕನನ್ನು ಹೊಡೆದು ಸಾಯಿಸಿದ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ. ದುಃಖಿತ ಕುಟುಂಬಕ್ಕೆ ನಮ್ಮ ಸಂತಾಪಗಳು. ಈ ಘಟನೆಯು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಅಪರಾಧಿಗಳಿಗೆ ಮುಕ್ತ ನಿಯಂತ್ರಣ ನೀಡಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ವಿಶೇಷವಾಗಿ ದಲಿತರ ಮೇಲಿನ ಅಪರಾಧಗಳ ಬಗ್ಗೆ, ಅವರು ಕಣ್ಣು ಮುಚ್ಚಿಕೊಂಡಿದ್ದಾರೆ. ಅದಕ್ಕಾಗಿಯೇ ದಲಿತರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಯುಪಿ ನಂಬರ್ 1 ಆಗಿದೆ ಎಂದು ಪಕ್ಷವು ಬರೆದಿದೆ.
