ಉದಯವಾಹಿನಿ, ಪ್ಯಾರಿಸ್: ಮೂರು ವಾರಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದ ಫ್ರಾನ್ಸ್‌ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೋಮವಾರ ಲೆಕೋರ್ನು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ರಕ್ಷಣಾ ಸಚಿವರಾಗಿದ್ದ 39 ವರ್ಷದ ಲೆಕೋರ್ನು ಸೆ.9 ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸೆಬಾಸ್ಟಿಯನ್ ಲೆಕೋರ್ನು ಹೊಸ ಕ್ಯಾಬಿನೆಟ್‌ ಘೋಷಣೆ ಮಾಡಿ ಸೋಮವಾರ ಪ್ರಥಮ ಸಭೆ ನಡೆಸಬೇಕಿತ್ತು. ಆದರೆ ಹೊಸ ಕ್ಯಾಬಿನೆಟ್‌ಗೆ ಆಡಳಿತ ಪಕ್ಷದಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 3 ವರ್ಷಗಳಲ್ಲಿ ಫ್ರಾನ್ಸ್‌ನಲ್ಲಿ ಏಳು ಪ್ರಧಾನಿಗಳು ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಯಾಕೆ..?: ಫ್ರಾನ್ಸ್‌ ಸಂಸತ್ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಸದ್ಯ ಫ್ರಾನ್ಸ್‌ನಲ್ಲಿ ಅಲ್ಪಮತದ ಸರ್ಕಾರವಿದೆ. 2026ರಲ್ಲಿ ಬಜೆಟ್ ಮಂಡಿಸಬೇಕಿದ್ದು, ಅದಕ್ಕೆ ಬಹುಮತದ ಅಂಗೀಕಾರ ಪಡೆಯಬೇಕಿದೆ. ಬಜೆಟ್‌ಗೆ ಅಂಗೀಕಾರ ಪಡೆಯಲು ವಿಫಲವಾದ ಬೆನ್ನಲ್ಲೇ ಸೆಬಾಸ್ಟಿಯನ್ ಲೆಕೋರ್ನು ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೊದಲಿದ್ದ ಪ್ರಧಾನಿಗಳಿಗೆ ಮಿತ್ರ ಕೂಟದಿಂದ ಬೆಂಬಲ ಸಿಗದ ಕಾರಣ ಅವರು ರಾಜೀನಾಮೆ ಸಲ್ಲಿಸಿದ್ದರು. ಎಡಪಂಥೀಯರ ಕೂಟ ಅಧ್ಯಕ್ಷರ ಚುನಾವಣೆಗೆ ಆಗ್ರಹಿಸುತ್ತಿದ್ದರೆ ಬಲಪಂಥೀಯರ ಆರ್‌ಎನ್ ಕೂಟವು ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆಗ್ರಹಿಸುತ್ತಿದೆ. ಆದರೆ ಮ್ಯಾಕ್ರನ್ 2027ರವರೆಗೆ ನಾನೇ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!