ಉದಯವಾಹಿನಿ, ಇಸ್ಲಾಮಾಬಾದ್: ಈ ಬಾರಿ ಭಾರತ ತನ್ನದೇ ಯುದ್ಧ ವಿಮಾನಗಳ ಅವಶೇಷಗಳ ಅಡಿಯಲ್ಲಿ ಹೂತುಹೋಗುತ್ತದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ಭಾರತೀಯ ಸೇನಾ ಪಡೆಯ ಮುಖ್ಯಸ್ಥರು ಪಾಕ್‌ಗೆ ಎಚ್ಚರಿಕೆ ನೀಡಿದ್ದರು. ಮತ್ತೆ ಕೆಣಕಿದ್ರೆ ಪಾಕಿಸ್ತಾನವನ್ನ ವಿಶ್ವಭೂಪಟದಿಂದಲೇ ಅಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಈ ಬಾರಿ ʻಭಾರತವು ಅದರ ಯುದ್ಧ ವಿಮಾನಗಳ ಅವಶೇಷಗಳಡಿಯಲ್ಲಿ ಹೂತುಹೋಗಲಿದೆʼ ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಆಸಿಫ್, ಭಾರತದ ಮಿಲಿಟರಿ ಮತ್ತು ರಾಜಕೀಯ ನಾಯಕರ ಇತ್ತೀಚಿನ ಹೇಳಿಕೆಗಳು ಅವರ ಕಳೆದುಹೋದ ವಿಶ್ವಾಸಾರ್ಹತೆಯನ್ನ ಪುನಃಸ್ಥಾಪಿಸುವ ವಿಫಲ ಪ್ರಯತ್ನ. ದೇಶೀಯ ಪ್ರತಿಕ್ರಿಯೆಯಿಂದ ಜನರನ್ನ ಬೇರೆಡೆಗೆ ಸೆಳೆಯಲು ಸರ್ಕಾರವು ಉದ್ವಿಗ್ನತೆ ಹುಟ್ಟುಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪಾಕಿಸ್ತಾನ ಅಲ್ಲಾಹನ ಹೆಸರಿನಲ್ಲಿ ನಿರ್ಮಿಸಲಾದ ರಾಷ್ಟ್ರ, ನಮ್ಮ ರಕ್ಷಕರು ಅಲ್ಲಾಹನ ಸೈನಿಕರು. ಈ ಬಾರಿ, ಭಾರತವೇನಾದರೂ ನಮ್ಮ ತಂಟೆಗೆ ಬಂದರೆ ಅದು ತನ್ನ ಯುದ್ಧವಿಮಾನಗಳ ಭಗ್ನಾವಶೇಷಗಳ ಅಡಿಯಲ್ಲಿ ಹೂತುಹೋಗಲಿದೆ. ಅಲ್ಲಾಹು ಅಕ್ಬರ್, ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
