ಉದಯವಾಹಿನಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಒಂದು ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ರಾಜಕೀಯದ ಗಂಭೀರ ಚರ್ಚೆಗಳಲ್ಲಿರುತ್ತಿದ್ದ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜಾಗತಿಕ ಸಂಗೀತ ಲೋಕದ ಹಾಟ್ ಸೆನ್ಸೇಷನ್ ಕೇಟಿ ಪೆರ್ರಿ ನಡುವೆ ಪ್ರೇಮಾಂಕುರವಾಗಿದೆ ಎಂಬ ಬಿಸಿ ಬಿಸಿ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರೂ ಕ್ಯಾಲಿಫೋರ್ನಿಯಾದಲ್ಲಿ ದೋಣಿಯೊಂದರಲ್ಲಿ ಆಪ್ತವಾಗಿರುವ ಫೋಟೋವೊಂದು ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾದ ಸುಂದರ ತೀರವಾದ ಸಾಂತಾ ಬಾರ್ಬರಾದಲ್ಲಿ, ಐಷಾರಾಮಿ ದೋಣಿಯ ಮೇಲೆ ನಡೆದಿದೆ ಎನ್ನಲಾದ ಈ ಪ್ರಣಯ ಪ್ರಸಂಗ ಪಾಪರಾಜಿಗಳ ಕಣ್ಣಿಗೆ ಬಿದ್ದಿದೆ. ವೈರಲ್ ಆದ ಫೋಟೋದಲ್ಲಿ, ಜಸ್ಟಿನ್ ಟ್ರುಡೊ ಶರ್ಟ್ ಇಲ್ಲದೆ ಕಾಣಿಸಿಕೊಂಡರೆ, ಕೇಟಿ ಪೆರ್ರಿ ಕಪ್ಪು ಬಣ್ಣದ ಮೊನೊಕಿನಿಯಲ್ಲಿ ಮಿಂಚುತ್ತಿದ್ದರು. ಇಬ್ಬರೂ ಪ್ರಣಯದ ಅಲೆಯಲ್ಲಿ ತೇಲುತ್ತಿದ್ದಂತೆ ಕಾಣುತ್ತಿದ್ದು, ಟ್ರುಡೊ ಅವರು ಕೇಟಿಗೆ ಚುಂಬಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ‘ದಿ ಡೈಲಿ ಮೇಲ್’ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. “ಅದು ಕೇಟಿಯ ದೋಣಿಯಾಗಿತ್ತು. ಅವಳು ದೋಣಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿಯೊಂದಿಗೆ ತುಂಬಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಳು. ಮೊದಲು ಆ ವ್ಯಕ್ತಿ ಯಾರೆಂದು ನನಗೆ ಗೊತ್ತಾಗಲಿಲ್ಲ, ಆದರೆ ಅವರ ತೋಳಿನ ಮೇಲಿದ್ದ ಹಚ್ಚೆ ನೋಡಿದಾಗ, ಓಹ್, ಇವರು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅಲ್ವಾ ಅಂತಾ ಗೊತ್ತಾಯ್ತು!” ಎಂದು ಅವರು ಹೇಳಿದ್ದಾರೆ. ಈ ಹಚ್ಚೆಯ ಗುರುತೇ ಈಗ ಈ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಮೊದಲೇ ಶುರುವಾಗಿತ್ತಾ ಈ ಪ್ರೇಮ ಪುರಾಣ..?: ಈ ದೋಣಿಯ ಘಟನೆಗೂ ಮುನ್ನವೇ ಇವರಿಬ್ಬರ ನಡುವೆ ಏನೋ ಬೇಯುತ್ತಿದೆ ಎಂಬ ಗುಸುಗುಸು ಶುರುವಾಗಿತ್ತು. ಕಳೆದ ಜುಲೈ ತಿಂಗಳ ಆರಂಭದಲ್ಲಿ, ಟ್ರುಡೊ ಮತ್ತು ಕೇಟಿ ಪೆರ್ರಿ ಕೆನಡಾದ ಮಾಂಟ್ರಿಯಲ್ ನಗರದ ಪ್ರತಿಷ್ಠಿತ ರೆಸ್ಟೋರೆಂಟ್ ಒಂದರಲ್ಲಿ ಡಿನ್ನರ್ ಮಾಡುವಾಗ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದು ಅವರನ್ನು ನೋಡಿದವರು, “ಇಬ್ಬರೂ ತುಂಬಾ ಆರಾಮವಾಗಿ, ನಗುತ್ತಾ ಮಾತನಾಡುತ್ತಿದ್ದರು. ಅವರು ಕಾಕ್‌ಟೇಲ್‌ಗಳು ಮತ್ತು ಲಾಬ್‌ಸ್ಟರ್ ಖಾದ್ಯವನ್ನು ಆನಂದಿಸುತ್ತಿದ್ದರು” ಎಂದು ಹೇಳಿದ್ದರು. ಅಂದಿನಿಂದಲೇ ಇವರಿಬ್ಬರ ಸ್ನೇಹದ ಬಗ್ಗೆ ಊಹಾಪೋಹಗಳು ಹರಡಲು ಆರಂಭವಾಗಿದ್ದವು.
