ಉದಯವಾಹಿನಿ, ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ, ನಿರ್ದೇಶನ ಮಾಡಿ ನಟಿಸಿರುವ, ರೋರಿಂಗ್ ಸ್ಟಾರ್ ಶ್ರೀಮುರುಳಿ ಅರ್ಪಿಸುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ಅಕ್ಟೋಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಟ್ರೈಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆಗೊಳಿಸಿದ್ದಾರೆ. ಒಂದಿಡೀ ಸಿನಿಮಾದ ಅಂತಃಸತ್ವವನ್ನು ಆಳವಾಗಿ ಗ್ರಹಿಸಿಕೊಂಡು ಚಿತ್ರತಂಡದ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲೇ ಮೊದಲೆಂಬಂಥಾ ಕಥಾ ಹಂದರ ಹೊಂದಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರಕ್ಕೆ ಶುಭ ಕೋರಿದ್ದಾರೆ.
ಅತ್ಯಂತ ಹುರುಪಿನಿಂದ ಟ್ರೈಲರ್ ಬಿಡುಗಡೆ ಮಾಡಿ ಮಾತಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಸಲ ʻತೊನ್ನುʼ ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರೋ ಚಿತ್ರವಿದು. ಸ್ವತಃ ಆ ಸಮಸ್ಯೆ ಹೊಂದಿರುವ ವ್ಯಕ್ತಿಯೇ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ನಟಿಸಿರುವ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಟಿಲಿಗೋ ಕೇಂದ್ರಿತವಾದ ಈ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡು ಹೆಮ್ಮೆಯಿಂದ ಅರ್ಪಿಸಲು ಮುಂದಾಗಿರೋದಾಗಿಯೂ ಶ್ರೀಮುರುಳಿ ಹೇಳಿದ್ದಾರೆ. ಕಥೆಯ ನೆಪದಲ್ಲಿ ನೆನಪೊಂದನ್ನ ಹಂಚಿಕೊಂಡ ರೋರಿಂಗ್ ಸ್ಟಾರ್ ಶಾಲಾ ದಿನಗಳಲ್ಲಿ ವಿಟಿಲಿಗೋ ಸಮಸ್ಯೆಯಿಂದ ಬಾಧಿತನಾಗಿದ್ದ ಗೆಳೆಯನ ಬಗ್ಗೆ ಹೇಳುತ್ತಲೇ, ವಿಟಿಲಿಗೋವನ್ನು ಸಮಸ್ಯೆ ಅಂದುಕೊಳ್ಳಬಾರದೆಂಬ ಸಂದೇಶವನ್ನೂ ರವಾನಿಸಿದರು. ಇದೇ ಹೊತ್ತಿನಲ್ಲಿ ಈ ಚಿತ್ರದ ವಿತರಣೆಗೂ ಸಹಾಯ ಮಾಡುವ ಭರವಸೆ ನೀಡಿದರು.
