ಉದಯವಾಹಿನಿ, ಟಿಪ್ಸ್ :ನೀವು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ, ಸಂದರ್ಶನಕ್ಕೂ ಕರೆ ಬಂದಿದೆ. ನಿಮ್ಮನ್ನು ಉದ್ಯೋಗದಾತರು ಹೇಗೆ ಆಯ್ಕೆ ಮಾಡುತ್ತಾರೆ ಎಂದು ಯೋಚಿಸಿದ್ದೀರಾ? ನೀವು ಆ ಹುದ್ದೆಗೆ ಸೂಕ್ತವಾದ ವ್ಯಕ್ತಿ, ಹೌದೇ ಅಲ್ಲವೇ ಎಂಬುದು ನಿಮ್ಮ ಸಂದರ್ಶಕರಿಗೆ ಹೇಗೆ ಗೊತ್ತಾಗುತ್ತದೆ? ಗೊತ್ತು ಮಾಡಿಕೊಳ್ಳಲು ಅವರಿಗೆಷ್ಟು ಸಮಯ ಬೇಕಾಗುತ್ತದೆ? ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿರಬಹುದು. ಇಂತಹ ಪ್ರಶ್ನೆಗಳಿಗೆ ‘ಕೆಲವೇ ನಿಮಿಷದಲ್ಲಿ ನನ್ನ ಬಗ್ಗೆ ಅವರಿಗೆ ಗೊತ್ತಾಗುತ್ತದೆ’ ಎಂಬ ತಪ್ಪು ಕಲ್ಪನೆತೂ ಇರಬಹುದು. ಈ ಬಗ್ಗೆ ಇತ್ತೀಚೆಗೆ ನಡೆದ ಅಧ್ಯಯನವೊಂದು ಹಲವಾರು ಹೊಸ ವಿಷಯಗಳನ್ನು ಹೇಳಿದೆ. ಸಂದರ್ಶನಕ್ಕೆ ಸಿದ್ಧತೆ ನಡೆಸುತ್ತಿರುವವರಿಗೆ, ಮುಂದೆ ಸಂದರ್ಶನ ಎದುರಿಸಲಿರುವವರಿಗೆ ಇದು ಬಹಳ ಉಪಯುಕ್ತವಾಗಿದೆ. ಈ ಅಧ್ಯಯನದ ಪ್ರಕಾರ ಶೇಕಡ 4.9ರಷ್ಟು ಸಂದರ್ಶಕರು ಮೊದಲ ನಿಮಿಷದಲ್ಲಿಯೇ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕೇ ಬೇಡವೇ ಎಂದು ನಿರ್ಧರಿಸಿದ್ದಾರೆ. ಶೇಕಡ 59.9ರಷ್ಟು ನಿರ್ಧಾರಗಳು ಮೊದಲ 15 ನಿಮಿಷದಲ್ಲಿ ಆಗುತ್ತದೆ ಎಂದು ತಿಳಿದುಬಂದಿದೆ. ಹೆಚ್ಚು ಸಮಯ ತೆಗೆದುಕೊಳ್ಳುವ ಸಂದರ್ಶನವು ಅಭ್ಯರ್ಥಿಗಳಿಗೆ ಮತ್ತು ನೇಮಕ ಮಾಡುವ ಕಂಪನಿಗೆ ಒಳ್ಳೆಯದು ಎನ್ನುವುದು ಸಂಶೋಧಕರ ಅಭಿಪ್ರಾಯ. ದೀರ್ಘಕಾಲ ಮಾತನಾಡಿದಾಗ ಅಭ್ಯರ್ಥಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಂದರ್ಶಕರಿಗೆ ಸಾಧ್ಯವಾಗುತ್ತದೆ. ಅಭ್ಯರ್ಥಿಗೂ ತನ್ನ ಪ್ರತಿಭೆಯೇನು ಎಂದು ಹೇಳಲು ಸಾಕಷ್ಟು ಸಮಯ ದೊರಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು ಗಮನಿಸಬೇಕಾದ ವಿಷಯಗಳು:-
- ಸಂದರ್ಶನಕ್ಕೆ ತಡವಾಗಿ ಹೋಗಬೇಡಿ.
- ತಲೆನೋವು ತರಿಸುವ ಸೆಂಟ್ ಹಾಕಬೇಡಿ.
- ಕಿವಿಗೆ ಬ್ಲೂಟೂಥ್ ಇಯರ್‌ಫೋನ್, ಕಣ್ಣಿಗೆ ಸನ್‌ಗ್ಲಾಸ್ ಧರಿಸುವುದು ಬೇಡ.
- ವೇತನದ ಬಗ್ಗೆ ಮೊದಲೇ ಪ್ರಶ್ನಿಸದಿರಿ.
- ರೆಸ್ಯೂಂ ಮತ್ತು ಇತರೆ ದಾಖಲೆಗಳನ್ನು ತರಲು ಮರೆಯಬೇಡಿ.
- ತುಂಬಾ ಪ್ರಶ್ನೆ ಕೇಳುವುದು/ಪ್ರಶ್ನೆಗಳನ್ನೇ ಕೇಳದೆ ಇರುವುದು ಮಾಡಬೇಡಿ.
- ಆಕಳಿಸಬೇಡಿ. ಚ್ಯುಯಿಂಗ್ ಗಮ್, ತಂಬಾಕು ಜಗಿಯಬೇಡಿ.
- ಸಂದರ್ಶಕರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ.
- ಆಗಾಗ ವಾಚ್ ನೋಡಬೇಡಿ.
1.ಸುಳ್ಳು ಹೇಳಬೇಡಿ: ಸಂದರ್ಶಕರು ಪ್ರಶ್ನೆ ಕೇಳಿದಾಗ ಸುಳ್ಳು ಉತ್ತರ ನೀಡಬೇಡಿ. ಉದ್ಯೋಗದಾತರಿಗೆ ‘ಸುಳ್ಳು ಹೇಳುವವರು’ ಇಷ್ಟವಾಗುವುದಿಲ್ಲ. ಇವರ ಪ್ರಕಾರ, ಸುಳ್ಳು ಹೇಳುವವರು ನಂಬಿಕೆಗೆ ಅರ್ಹರಲ್ಲ. ಹೀಗಾಗಿ ಸುಳ್ಳು ಹೇಳಲೇಬೇಡಿ.

2.ಮೊಬೈಲ್ ಕಡೆ ಗಮನ ಬೇಡ: ಸಂದರ್ಶನ ಮಾಡುತ್ತಿರುವ ಸಮಯದಲ್ಲಿ ಅಭ್ಯರ್ಥಿಯು ಮೊಬೈಲ್ ಕರೆಗೆ ಉತ್ತರಿಸುವುದು ಅಥವಾ ಮೆಸೆಜ್ ಮಾಡುವುದು ಸಂದರ್ಶಕರಿಗೆ ಇಷ್ಟವಾಗುವುದಿಲ್ಲ.

3.ಆಹಂಕಾರ ಬೇಡ: ನಿಮ್ಮ ಮಾತಿನಲ್ಲೇ ನೀವು ಆತ್ಮರತಿಯ ವ್ಯಕ್ತಿಯೋ, ಸೊಕ್ಕಿನ ವ್ಯಕ್ತಿಯೋ, ಆಡಂಬರದ ವ್ಯಕ್ತಿಯೋ ಎಂದು ಸಂದರ್ಶಕರಿಗೆ ತಿಳಿದುಬಿಡುತ್ತದೆ.

4.ಉಡುಗೆ ತೊಡುಗೆ: ನಿಮ್ಮ ಡ್ರೆಸ್ ನಿಮ್ಮ ಬಗ್ಗೆ ಸಾಕಷ್ಟು ಹೇಳುತ್ತದೆ. ಹೀಗಾಗಿ ಅನುಚಿತವಾಗಿ ಡ್ರೆಸ್ ಹಾಕಿಕೊಂಡು ಸಂದರ್ಶನಕ್ಕೆ ಹೋಗಬೇಡಿ.

5.ಹಿಂಜರಿಕೆ: ಸಂದರ್ಶನದ ಸಮಯದಲ್ಲಿ ಹಿಂಜರಿಕೆ, ಭಯ ಪ್ರದರ್ಶಿಸದೆ ಆತ್ಮ ವಿಶ್ವಾಸದಿಂದ ವರ್ತಿಸಿ.

6.ಹಳೆ ಬಾಸ್ ಬಗ್ಗೆ ದ್ವೇಷ ಬೇಡ: ಈಗ ನೀವು ಇರುವ ಕಂಪನಿಗೆ ಅಥವಾ ಅಲ್ಲಿನ ಬಾಸ್‌ಗೆ ಬಯ್ಯುವುದನ್ನು ಹೊಸ ಕಂಪನಿಯ ಉದ್ಯೋಗದಾತರು ಇಷ್ಟಪಡುವುದಿಲ್ಲ. ಯಾಕೆಂದರೆ, ಮುಂದೊಂದು ದಿನ ನೀವು ಈ ಕಂಪನಿಗೂ, ಬಾಸ್‌ಗೂ ಬಯ್ಯಲ್ಲಿದ್ದೀರಿ ಎಂದುಕೊಳ್ಳುತ್ತಾರೆ.

7.ತಯಾರಿ ನಡೆಸದೆ ಹೋಗಬೇಡಿ: ನಿಮ್ಮ ರೆಸ್ಯೂಂ ಅಥವಾ ಸಿವಿಯಲ್ಲಿ ನೀಡಿರುವ ವಿಷಯಗಳನ್ನು ಮನನ ಮಾಡಿಕೊಳ್ಳಿ. ಯಾಕೆಂದರೆ, ನಿಮ್ಮ ರೆಸ್ಯೂಂ ನೋಡಿಕೊಂಡು ಸಂದರ್ಶಕರು ಏನಾದರೂ ಪ್ರಶ್ನೆ ಕೇಳಬಹುದು. ಯಾವ ರೀತಿಯ ಉದ್ಯೋಗಿಯನ್ನು ಕಂಪನಿ ಬಯಸುತ್ತದೆ ಎಂದು ಜಾಬ್ ಜಾಹೀರಾತಿನಿಂದ ತಿಳಿದುಕೊಳ್ಳಿ. ನೀವು ಅರ್ಜಿ ಸಲ್ಲಿಸಿದ ಕಂಪನಿಯ ಬಗ್ಗೆ ತಿಳಿದುಕೊಳ್ಳಿ.

