ಉದಯವಾಹಿನಿ , ದೋಹಾ: ಹಲವು ತಿಂಗಳಿಂದ ಹಿಂಸಾತ್ಮಕ ಸ್ವರೂಪ ಪಡೆದಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ(Pakistan-Afghanistan Talks) ನಡುವೆ ನಡೆಯುತ್ತಿರುವ ಬಿಕ್ಕಟ್ಟು ಶಾಂತಿಯತ್ತ ಮುಖ ಮಾಡಿದೆ. ದೋಹಾದಲ್ಲಿ ಶನಿವಾರ ತಡರಾತ್ರಿ ನಡೆದ ಪಾಕಿಸ್ತಾನ-ಅಫ್ಘಾನಿಸ್ತಾನದ ಮೊದಲ ಸುತ್ತಿನ ಮಾತುಕತೆಗಳು ಸಕಾರಾತ್ಮಕವಾಗಿ ಮುಕ್ತಾಯಗೊಂಡವು. ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಶಾಂತಿ ಸಭೆಯಲ್ಲಿ ಉಭಯ ರಾಷ್ಟ್ರಗಳು ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದವು.
ದೋಹಾದ ಉನ್ನತ ರಾಜತಾಂತ್ರಿಕ ನಿಯೋಗಗಳು ರಾತ್ರಿಯಿಡೀ ಕತಾರ್‌ನಲ್ಲಿಯೇ ಇದ್ದು, ಎರಡನೇ ಹಂತದ ಮಾತುಕತೆಗಾಗಿ ಭಾನುವಾರ ಬೆಳಿಗ್ಗೆ ಚರ್ಚೆಗಳನ್ನು ಪುನರಾರಂಭಿಸುತ್ತವೆ. ಒಂದು ವಾರದೊಳಗೆ ಮುಂದಿನ ಸುತ್ತಿನ ಮಾತುಕತೆಯನ್ನು ನಿರೀಕ್ಷಿಸಲಾಗಿದೆ. ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಐಎಸ್‌ಐ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಸಿಮ್ ಮಲಿಕ್ ಪಾಕಿಸ್ತಾನಿ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ.
ಕತಾರ್ ಹೇಳಿಕೆಯ ಪ್ರಕಾರ, ಕದನ ವಿರಾಮದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದರ ಅನುಷ್ಠಾನವನ್ನು ವಿಶ್ವಾಸಾರ್ಹ ಮತ್ತು ಸುಸ್ಥಿರ ರೀತಿಯಲ್ಲಿ ಪರಿಶೀಲಿಸಲು ಮುಂಬರುವ ದಿನಗಳಲ್ಲಿ ಅನುಸರಣಾ ಸಭೆಗಳನ್ನು ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡರು. ಗಡಿ ಹೋರಾಟದಲ್ಲಿ ಡಜನ್‌ಗಟ್ಟಲೇ ಜನರು ಸಾವನ್ನಪ್ಪಿದ ನಂತರ ಈ ಚರ್ಚೆಗಳು ನಡೆದಿವೆ.

Leave a Reply

Your email address will not be published. Required fields are marked *

error: Content is protected !!