ಉದಯವಾಹಿನಿ, ತಿರುವನಂತಪುರಂ: ಶಬರಿಮಲೆ ಸನ್ನಿಧಾನದಲ್ಲಿ ಯಾತ್ರಿಗಳು ಮೃತಪಟ್ಟರೆ ಸ್ಟ್ರೆಚರ್‌ನಲ್ಲಿ ಹೊತ್ತು ಪಂಬಾಗೆ ತರಬಾರದು. ಕಡ್ಡಾಯವಾಗಿ ಆಂಬುಲೆನ್ಸ್‌ನಲ್ಲೇ ತರಬೇಕು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ. ಮೃತಪಟ್ಟವರನ್ನು ಹೊತ್ತು ತಂದರೆ ಶಬರಿಮಲೆ ಏರುವ ಭಕ್ತರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮೃತದೇಹ ತರುವುದನ್ನು ನೋಡಿದರೆ ಶಬರಿಮಲೆ ಬೆಟ್ಟ ಹತ್ತುವ ಭಕ್ತರ ಮನೋವೇದನೆ ಜಾಸ್ತಿ ಮಾಡಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈವರೆಗೆ ಶಬರಿಮಲೆ ಯಾತ್ರಿಗಳು ಮೃತರಾದರೆ ಮೃತದೇಹ ಹೊತ್ತು ಪಂಬಾಗೆ ತರುತ್ತಿದ್ದರು.
ಈ ಸೀಸನ್‌ನಲ್ಲಿ ಇದುವರೆಗೆ 8 ದಿನದಲ್ಲಿ 8 ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷ ಈ ಸೀಸನ್ನಿನಲ್ಲಿ 150ಕ್ಕೂ ಹೆಚ್ಚು ಭಕ್ತರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಾರೆ. ಇದರಲ್ಲಿ 40-42 ಭಕ್ತರು ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾರೆ. ಶಬರಿಮಲೆಗೆ ಬರುವ ಭಕ್ತರಿಗೆ ದಾರಿ ಮಧ್ಯೆ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆ ಮಾಡುವಂತೆಯೂ ದೇವಸ್ವಂ ಬೋರ್ಡ್‌ಗೆ ಹೈಕೋರ್ಟ್ ಸೂಚನೆ ನೀಡಿದೆ.
