ಉದಯವಾಹಿನಿ : ರಾಜಮೌಳಿ ನಿರ್ದೇಶನ ಮಾಡಿ, ಮಹೇಶ್ ಬಾಬು ನಟಿಸುತ್ತಿರುವ ಹೊಸ ಸಿನಿಮಾದ ಹೆಸರನ್ನು ಇತ್ತೀಚೆಗಷ್ಟೆ ರಾಜಮೌಳಿ ಬಿಡುಗಡೆ ಮಾಡಿದ್ದರು. ಸಿನಿಮಾಕ್ಕೆ ‘ವಾರಣಾಸಿ’ ಎಂದು ಹೆಸರಿಡಲಾಗಿದ್ದು, ಸಿನಿಮಾ ಬಿಡುಗಡೆ ಆಗಲಿರುವ ಎಲ್ಲ ಭಾಷೆಗಳಲ್ಲಿಯೂ ಸಿನಿಮಾದ ಹೆಸರು ‘ವಾರಣಾಸಿ’ ಎಂದೇ ಇರಲಿದೆ. ಆದರೆ ಸಿನಿಮಾದ ಹೆಸರು ಘೋಷಿಸಿದ ಬಳಿಕ ತೆಲುಗು ಚಿತ್ರರಂಗದಲ್ಲಿ ಸಣ್ಣ ವಿವಾದವೊಂದು ಸೃಷ್ಟಿಯಾಗಿತ್ತು. ಅಸಲಿಗೆ ‘ವಾರಣಾಸಿ’ ಹೆಸರನ್ನು ಈ ಮೊದಲು ಬೇರೆ ನಿರ್ಮಾಣ ಸಂಸ್ಥೆಯೊಂದು ನೊಂದಣಿ ಮಾಡಿಸಿದೆ. ಇದೇ ಕಾರಣಕ್ಕೆ ತೆಲುಗಿನಲ್ಲಿ ಮಾತ್ರವೇ ಸಿನಿಮಾದ ಹೆಸರನ್ನು ಬದಲಾಯಿಸಿದ್ದಾರೆ ರಾಜಮೌಳಿ.
‘ವಾರಣಾಸಿ’ ಸಿನಿಮಾವನ್ನು ತೆಲುಗಿನ ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯೊಂದು ನೊಂದಣಿ ಮಾಡಿಸಿದೆ. ತೆಲುಗು ಫಿಲಂ ಪ್ರೊಡ್ಯೂಸರ್ಸ್ ಕೌನ್ಸಿಲ್ನವರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ನವರಿಗೆ ‘ವಾರಣಾಸಿ’ ಹೆಸರಿನ ರಿಜಿಸ್ಟರ್ ಮಾಡಿ ದಾಖಲೆಗಳನ್ನು ನಿಡಿದ್ದಾರೆ. 2023 ರಿಂದಲೂ ಈ ಹೆಸರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ಬಳಿಯೇ ಇದೆ. ಜೂನ್ 24, 2025ರಂದು ಹೆಸರನ್ನು ಮತ್ತೆ ಒಂದು ವರ್ಷಗಳ ಕಾಲಕ್ಕೆ ನೊಂದಣಿ ಮಾಡಿಸಲಾಗಿದೆ.
ತೆಲುಗಿನಲ್ಲಿ ‘ವಾರಣಾಸಿ’ ಹೆಸರು ಬೇರೆಯವರ ಬಳಿ ಇರುವ ಕಾರಣ ರಾಜಮೌಳಿ, ತಮ್ಮ ಸಿನಿಮಾದ ಹೆಸರನ್ನು ಬದಲಾಯಿಸಿದ್ದಾರೆ. ಹಾಗೆಂದು ಸಂಪೂರ್ಣವಾಗಿ ಬದಲಿಸಿಲ್ಲ, ಬದಲಿಗೆ ‘ವಾರಣಾಸಿ’ ಸಿನಿಮಾವನ್ನು ‘ರಾಜಮೌಳಿ ವಾರಣಾಸಿ’ ಎಂದು ನೊಂದಣಿ ಮಾಡಿಸಿದ್ದಾರೆ. ತೆಲುಗಿನಲ್ಲಿ ಮಾತ್ರ ‘ವಾರಣಾಸಿ’ ಸಿನಿಮಾ ‘ರಾಜಮೌಳಿ ವಾರಣಾಸಿ’ ಹೆಸರಿನಿಂದ ಬಿಡುಗಡೆ ಆಗಲಿದೆ. ಭಾರಿ ದೊಡ್ಡ ಕಾರ್ಯಕ್ರಮ ಮಾಡಿ ಸಿನಿಮಾದ ಹೆಸರನ್ನು ಘೋಷಿಸಿರುವ ಕಾರಣ ಈಗ ಮತ್ತೆ ಬೇರೆ ಹೆಸರು ಇಡಲು ಕಷ್ಟ, ಹಾಗಾಗಿ ಸಿನಿಮಾದ ಹೆಸರನ್ನು ಹೆಚ್ಚು ಬದಲಾವಣೆ ಮಾಡದೆ ‘ರಾಜಮೌಳಿ ವಾರಣಾಸಿ’ ಎಂದು ಇಡಲಾಗಿದೆ.
