ಉದಯವಾಹಿನಿ, ಪ್ಯಾರಿಸ್(ಫ್ರಾನ್ಸ್​): 2025 ಭೂಮಿಯ ಎರಡನೇ ಅತಿ ಹೆಚ್ಚು ತಾಪಮಾನ ದಾಖಲಿಸಿದ ವರ್ಷವಾಗುವ ಹಾದಿಯಲ್ಲಿದೆ. ಇದು 2023ರಲ್ಲಿ ದಾಖಲಾಗಿದ್ದ ತಾಪಮಾನವನ್ನು ಸರಿಗಟ್ಟಲಿದೆ. 2024 ಅತೀ ಹೆಚ್ಚು ತಾಪಮಾನ ದಾಖಲಾದ ವರ್ಷವಾಗಿದೆ ಎಂದು ಯುರೋಪ್‌ನ ಜಾಗತಿಕ ತಾಪಮಾನ ವೀಕ್ಷಣಾಲಯ ಮಂಗಳವಾರ ತಿಳಿಸಿದೆ.ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವೆಯ ದತ್ತಾಂಶವು ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.5C ಗಿಂತ ಹೆಚ್ಚಾಗಲಿದೆ. ಇದು 2015ರ ಪ್ಯಾರಿಸ್ ಒಪ್ಪಂದದಲ್ಲಿ ಸುರಕ್ಷಿತವೆಂದು ಪರಿಗಣಿಸಲಾದ ಮಿತಿಯಾಗಿದೆ.ಜನವರಿ ಮತ್ತು ನವೆಂಬರ್ ನಡುವೆ ತಾಪಮಾನವು ಸರಾಸರಿ 1.48C ರಷ್ಟು ಏರಿಕೆಯಾಗಿದೆ. ಅಂದರೆ 2025 ಎರಡನೇ ಹೆಚ್ಚು ತಾಪಮಾನ ವರ್ಷವಾಗಿದ್ದ 2023ಕ್ಕೆ ಸಮನಾಗಲಿದೆ. 2023–2025ರ ಮೂರು ವರ್ಷಗಳ ಸರಾಸರಿ ಮೊದಲ ಬಾರಿಗೆ 1.5C ಮೀರುವ ಹಾದಿಯಲ್ಲಿದೆ ಎಂದು ಕೋಪರ್ನಿಕಸ್‌ನ ಹವಾಮಾನದ ಕಾರ್ಯತಂತ್ರದ ಮುಂದಾಳು ಸಮಂತಾ ಬರ್ಗೆಸ್ ತಿಳಿಸಿದ್ದಾರೆ.
ಮುಂದಿನ ಕೆಲವು ವರ್ಷಗಳಲ್ಲಿ 1.5C ಗಿಂತ ಕಡಿಮೆ ಜಾಗತಿಕ ತಾಪಮಾನವನ್ನು ತಡೆಯಲು ಪ್ರಪಂಚಕ್ಕೆ ಸಾಧ್ಯವಾಗುವುದಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅಕ್ಟೋಬರ್‌ನಲ್ಲಿ ಎಚ್ಚರಿಸಿದ್ದರು.ಕೋಪರ್ನಿಕಸ್ ಪ್ರಕಾರ, ಕಳೆದ ನವೆಂಬರ್‌ನಲ್ಲಿ ಮೂರನೇ ಅತಿ ಹೆಚ್ಚು ತಾಪಮಾನ ಹೊಂದಿದ್ದ ತಿಂಗಳಾಗಿದೆ.

ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.54C ಹೆಚ್ಚಾಗಿದೆ, ಸರಾಸರಿ ಮೇಲ್ಮೈ ಗಾಳಿಯ ಉಷ್ಣತೆಯು 14.02C ತಲುಪಿದೆ. ಈ ಏರಿಕೆ ಸಣ್ಣದಾಗಿ ಕಂಡರೂ, ಇದು ಈಗಾಗಲೇ ಹವಾಮಾನವನ್ನು ಅಸ್ಥಿರಗೊಳಿಸುತ್ತಿದೆ ಮತ್ತು ಬಿರುಗಾಳಿಗಳು, ಪ್ರವಾಹಗಳು ಮತ್ತು ಇತರ ವಿಪತ್ತುಗಳನ್ನು ಇನ್ನಷ್ಟು ಭೀಕರವಾಗಿಸಿ ಆಗಾಗ್ಗೆ ಸೃಷ್ಟಿಸುತ್ತಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.”ಆಗ್ನೇಯ ಏಷ್ಯಾದಲ್ಲಿ ಉಷ್ಣವಲಯದ ಚಂಡಮಾರುತಗಳು ಸೇರಿದಂತೆ ಹಲವಾರು ಹವಾಮಾನ ವೈಪರೀತ್ಯಗಳು ಈ ತಿಂಗಳಿನಲ್ಲಿ ಸಂಭವಿಸಿದ್ದು, ಪ್ರವಾಹ ಮತ್ತು ಜೀವಹಾನಿಗೆ ಕಾರಣವಾಗಿದೆ” ಎಂದು ವೀಕ್ಷಣಾಲಯ ಹೇಳಿದೆ.ನವೆಂಬರ್‌ನಲ್ಲಿ ಸುಮಾರು 260 ಜನರನ್ನು ಬಲಿತೆಗೆದುಕೊಂಡ ಸತತ ಚಂಡಮಾರುತಗಳಿಂದ ಫಿಲಿಪೈನ್ಸ್ ತತ್ತರಿಸಿತ್ತು. ಆದರೆ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್ ಭಾರಿ ಪ್ರವಾಹಕ್ಕೆ ತುತ್ತಾಯಿತು. ಸೆಪ್ಟಂಬರ್ ನಿಂದ ನವೆಂಬರ್ ವರೆಗಿನ ಉತ್ತರ ಗೋಳಾರ್ಧದ ಶರತ್ಕಾಲದ ಜಾಗತಿಕ ಸರಾಸರಿ ತಾಪಮಾನವು 2023 ಮತ್ತು 2024 ರ ನಂತರ ದಾಖಲೆಯ ಮೂರನೇ ಅತ್ಯಧಿಕವಾಗಿದೆ.

Leave a Reply

Your email address will not be published. Required fields are marked *

error: Content is protected !!