ಉದಯವಾಹಿನಿ, ಢಾಕಾ : 2026ರ ಫೆ. 12ರಂದು ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ಎದುರಿಸಲಿದೆ. 2024ರಲ್ಲಿ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆಯಿಂದ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. 2026ರ ಫೆಬ್ರವರಿ 12ರಂದು ಬೆಳಗ್ಗೆ 7.30ರಿಂದ ಸಂಜೆ 4.30ರವರೆಗೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತರಾಗಿರುವ ಎಎಂಎಂ ನಸೀರ್ ಉದ್ದಿನ್ ಘೋಷಣೆ ಮಾಡಿದ್ದಾರೆ.ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ರಾಷ್ಟ್ರೀಯ ಒಮ್ಮತ ಆಯೋಗದ ಸುಧಾರಣಾ ಪ್ರಸ್ತಾವನೆಗಳ ಸರಣಿಯ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಕೂಡ ಮತದಾನದ ದಿನದಂದೇ ಸಂಗ್ರಹಿಸಲಾಗುವುದು. ಯೂನಸ್ ಅವರನ್ನು ಸಿಇಸಿ ಮುಖ್ಯಸ್ಥ ಮೊಹಮ್ಮದ್ ಶಹಾಬುದ್ದೀನ್ ಭೇಟಿಯಾದ ಒಂದು ದಿನದ ನಂತರ ಈ ಚುನಾವಣಾ ಘೋಷಣೆ ಹೊರ ಬಿದ್ದಿದೆ. ಸಾರ್ವತ್ರಿಕ ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಮತ್ತು ಅರ್ಥಪೂರ್ಣರೀತಿಯಲ್ಲಿ ನಡೆಸಲು ಗರಿಷ್ಠ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಆಯೋಗ ಭರವಸೆ ನೀಡಿದೆ.ಚುನಾವಣೆ ಮತ್ತು ಜನಾಭಿಪ್ರಾಯ ಸಂಗ್ರಹಣೆಯನ್ನು ಯಶಸ್ವಿಗೊಳಿಸುವಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಮತದಾರರಿಂದ ಪ್ರಾಮಾಣಿಕ ಭಾಗವಹಿಸುವಿಕೆ ಮತ್ತು ಸಕ್ರಿಯ ಸಹಕಾರ ನೀಡುವಂತೆ ಚುನಾವಣಾ ಆಯೋಗ ಕೋರಿದೆ.
ದೇಶದಲ್ಲಿ 2024ರ ಜನವರಿಯಲ್ಲಿ ಕೊನೆಯ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ಪ್ರಮುಖ ಪಕ್ಷಗಳ ವಿವಾದ ಮತ್ತು ಬಹಿಷ್ಕಾರದಿಂದ ಕೂಡಿದ ಚುನಾವಣೆಯಲ್ಲಿ ಹಸೀನಾ ಭರ್ಜರಿ ಜಯ ಸಾಧಿಸಿದ್ದರು. ಈ ವಿಜಯದ ಆರು ತಿಂಗಳ ಬಳಿಕ ಹಸೀನಾ ಸರ್ಕಾರದ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದ್ದವು. ಬಂಗಾಳದ ರಸ್ತೆಗಳಲ್ಲಿ ನಡೆದ ಹಿಂಸಾತ್ಮಾಕ ಪ್ರತಿಭಟನೆಯು ಹಸೀನಾರನ್ನು 2024ರ ಆಗಸ್ಟ್ ಅಂದು ಭಾರತಕ್ಕೆ ಪಲಾಯನ ಮಾಡುವಂತೆ ಮಾಡಿತ್ತು. ಇದಾದ ಮೂರು ದಿನಗಳ ಬಳಿಕ ಮಧ್ಯಂತರ ಸರ್ಕಾರ ಮುಖ್ಯ ಸಲಹೆಗಾರರಾಗಿ ಯೂನಸ್ ಅಧಿಕಾರವಹಿಸಿಕೊಂಡಿದ್ದರು. ಮಧ್ಯಂತರ ಸರ್ಕಾರ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಎಲ್ಲಾ ಚಟುವಟಿಕೆಯನ್ನು ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿ ನಿರ್ಬಂಧಿಸಲಾಗಿದೆ.78 ವರ್ಷದ ಹಸೀನಾಗೆ ಕಳೆದ ವರ್ಷ ದೇಶದಲ್ಲಿ ಭುಗಿಲೆದ್ದ ದಂಗೆ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಈಗಾಗಲೇ ಮರಣದಂಡನೆ ವಿಧಿಸಲಾಗಿದೆ.
