ಉದಯವಾಹಿನಿ, ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಡಿಸೆಂಬರ್ 5ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿರುವ ಈ ಸಿನಿಮಾ ಒಂದೇ ವಾರದಲ್ಲಿ ₹ 250 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂಬುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಈ ಸಿನಿಮಾ ಪ್ರದರ್ಶನಕ್ಕೂ ಮುನ್ನ, ಚಿತ್ರಮಂದಿರದಲ್ಲಿ ನಡೆದಿರುವ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ದೇಶಭಕ್ತಿ, ವೈಯಕ್ತಿಕ ಆಯ್ಕೆ ಹಾಗೂ ಚಿತ್ರಮಂದಿರದಲ್ಲಿನ ವರ್ತನೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ಪ್ರಸಾರವಾಗುವ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ನೀಡಲಿಲ್ಲ ಎಂಬ ಆರೋಪದ ಮೇಲೆ ಯುವಕನೊಬ್ಬನನ್ನು ಹೊರಗೆ ಕಳುಹಿಸಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ‘ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತದಲ್ಲಿತ್ತು. ಹೆಚ್ಚಿನ ಪ್ರೇಕ್ಷಕರು, ಹೊರಗೆ ಹೋಗುವಂತೆ ಆತನನ್ನು ಒತ್ತಾಯಿಸಿದರು. ಅಷ್ಟರಲ್ಲಿ ಚಿತ್ರಮಂದಿರದ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ, ಯುವಕನಿಗೆ ಟಿಕೆಟ್ ಹಣವನ್ನು ಹಿಂತಿರುಗಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
