
ಉದಯವಾಹಿನಿ, ಅಮರಾವತಿ : 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಬ್ಬ ಮಾದಕ ದ್ರವ್ಯ ನೀಡಿ, ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾನೆ. ಅಪ್ರಾಪ್ತೆಯ ಒಪ್ಪಿಗೆಯಿಲ್ಲದೆ ಆಕೆಯೊಂದಿಗೆ ಫೋಟೊ ತೆಗೆದು, ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಇದನ್ನು ತಿಳಿದ ವಿದ್ಯಾರ್ಥಿನಿಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದೆ.ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಕಾರ, ಅದೇ ಕಾಲೇಜಿನಲ್ಲಿ ಓದುತ್ತಿರುವ ಹಿರಿಯ ವಿದ್ಯಾರ್ಥಿಯೊಬ್ಬ ಇನ್‌ಸ್ಟಾಗ್ರಾಮ್ ಮೂಲಕ ಪ್ರಥಮ ವರ್ಷದ ಇಂಟರ್ಮೀಡಿಯೇಟ್ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡಿದ್ದಾನೆ. ಆಕೆಯ ವಿಶ್ವಾಸ ಗಳಿಸಿದ ನಂತರ, ಎರಡನೇ ವರ್ಷದ ವಿದ್ಯಾರ್ಥಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಮನವೊಲಿಸಿ ಕ್ರಮೇಣ ಮಾದಕ ವ್ಯಸನಿಯನ್ನಾಗಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ಅಪ್ರಾಪ್ತೆಯ ಒಪ್ಪಿಗೆಯಿಲ್ಲದೆ ಆಕೆಯ ಜತೆ ಅಶ್ಲೀಲವಾಗಿ ವರ್ತಿಸಿದ್ದಾನೆ. ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ ಮತ್ತು ಫೋಟೊಗಳನ್ನು ತೆಗೆದುಕೊಂಡಿದ್ದಾನೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಹುಡುಗಿಯ ತಾಯಿ ಆಕೆಯ ಫೋನ್ ಪರಿಶೀಲಿಸಿದ್ದಾರೆ. ಯುವಕನ ಜತೆಗಿನ ಆತ್ಮೀಯ ಫೋಟೋಗಳನ್ನು ಕಂಡು ಪ್ರಶ್ನಿಸಿದ್ದಾರೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ಹುಡುಗಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ. ತನ್ನ ಪುತ್ರಿಯ ಮಾದಕ ವ್ಯಸನದ ಬಗ್ಗೆ ತಿಳಿದ ನಂತರ ಮಾನಸಿಕವಾಗಿ ಆಘಾತಕ್ಕೊಳಗಾದ ತಾಯಿ, ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
