ಉದಯವಾಹಿನಿ, ಮುಂಬೈ: ಮುಂಬೈ–ಗೋವಾ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದ ಮಧ್ಯೆ, ಮಹಾರಾಷ್ಟ್ರದ ರೈಗಡ ಜಿಲ್ಲೆಯ 28 ವರ್ಷದ ಚೈತನ್ಯ ಪಾಟೀಲ್ ಎಂಬ ಯುವಕ ಪಾದಯಾತ್ರೆ ಮಾಡಿದ್ದಾರೆ. ರಸ್ತೆಯ ಸುರಕ್ಷತಾ ಲೋಪಗಳು ಹಾಗೂ ಪ್ರಯಾಣಿಕರು ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಸಲುವಾಗಿ ಅವರು 490 ಕಿ.ಮೀ. ದೂರ ನಡೆದಿದ್ದಾರೆ. ತಮ್ಮ ವರದಿಯನ್ನು ಸಂಸದರ ಮೂಲಕ ಅವರು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕಳುಹಿಸಿದ್ದಾರೆ.

ಚೈತನ್ಯ ಪಾಟೀಲ್ ತಮ್ಮ ಅಭಿಯಾನಕ್ಕೆ ರಸ್ತಾ ಸತ್ಯಾಗ್ರಹ ಎಂದು ಹೆಸರಿಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ-66ರಲ್ಲಿ 29 ದಿನಗಳ ಕಾಲ ನಡೆದುಕೊಂಡು ಹೋಗಿದ್ದಾರೆ. ಗುಂಡಿಗಳು, ಅಪಘಾತ-ಪೀಡಿತ ಪ್ರದೇಶಗಳು, ಕಾಣೆಯಾದ ರಸ್ತೆ ಫಲಕಗಳು, ಅಪೂರ್ಣ ಸೇತುವೆಗಳು ಮತ್ತು ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಇತರ ಅಪಾಯಗಳನ್ನು ಈ ವೇಳೆ ಅವರು ದಾಖಲಿಸಿದರು. ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯನ್ನು ಸುರಕ್ಷಿತ, ಅಪಘಾತ ಮುಕ್ತ ಮತ್ತು ಉತ್ತಮ ಗುಣಮಟ್ಟ ರಸ್ತೆಯನ್ನಾಗಿ ಮಾಡುವುದು ನನ್ನ ಏಕೈಕ ಗುರಿ. ಇದರಿಂದ ಜನರು ಭಯವಿಲ್ಲದೆ ಪ್ರಯಾಣಿಸಬಹುದು. ಕೆಟ್ಟ ರಸ್ತೆಗಳಿಂದಾಗಿ ಜನರ ಜೀವಕ್ಕೆ ಅಪಾಯವಾಗಬಾರದು ಎಂದು ಪಾಟೀಲ್ ಹೇಳಿದರು.

ಅವರು ಆಗಸ್ಟ್ 9ರಂದು ರಾಯಗಢದ ಪಲಾಸ್ಪೆಯಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಅಕ್ಟೋಬರ್ 20ರಂದು ಅದನ್ನು ಮುಕ್ತಾಯಗೊಳಿಸಿದರು. ಭಾರಿ ಮಳೆ ಮತ್ತು ಆರೋಗ್ಯ ಸಮಸ್ಯೆಗಳು ಕಾಡಿದರೂ ಅವರು ಧೃತಿಗೆಡಲಿಲ್ಲ. ಪಾದಯಾತ್ರೆಯನ್ನು ಪೂರ್ಣಗೊಳಿಸಿ, ಎಲ್ಲೆಲ್ಲಿ ಏನು ಸಮಸ್ಯೆಯಿದೆ ಎಂಬುದನ್ನು ಅವರು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!