ಉದಯವಾಹಿನಿ, ಕೋಲ್ಕತ್ತಾ : ಪ್ರಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯ ಗೋಟ್ ಪ್ರವಾಸದ ಕಾರ್ಯಕ್ರಮದಲ್ಲಿ ಕೋಲ್ಕತ್ತಾ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಅವ್ಯವಸ್ಥೆಯಿಂದಾಗಿ ಪಶ್ಚಿಮ ಬಂಗಾಳ ಕ್ರೀಡಾ ಸಚಿವರ ತಲೆದಂಡವಾಗಿದೆ. ಘಟನೆ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ ನಂತರ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಮಂಗಳವಾರ ರಾಜೀನಾಮೆ ನೀಡಿದರು. ಅವ್ಯವಸ್ಥೆಗೆ ಹೆಚ್ಚಿನ ಟೀಕೆಗಳನ್ನು ಎದುರಿಸುತ್ತಿರುವ ಬಿಸ್ವಾಸ್, ಘಟನೆಯ ಬಗ್ಗೆ ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಯುವುದಕ್ಕಾಗಿ ರಾಜೀನಾಮೆ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬರೆದ ಕೈಬರಹದ ಪತ್ರದಲ್ಲಿ ತಿಳಿಸಿದ್ದಾರೆ.
ಮಮತಾ ಅವರ ಅತ್ಯಂತ ವಿಶ್ವಾಸಾರ್ಹ ಸಹಾಯಕರಲ್ಲಿ ಒಬ್ಬರಾದ ಮತ್ತು ಟಿಎಂಸಿಯಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ ಬಿಸ್ವಾಸ್ ಅವರ ರಾಜೀನಾಮೆಯು, ನಿರ್ಣಾಯಕ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳಿದ್ದರೂ, ಆಡಳಿತ ಪಕ್ಷವು ಯಾವುದೇ ಅವಕಾಶವನ್ನು ಬಿಟ್ಟುಕೊಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಅರ್ಜೆಂಟೀನಾದ ಫುಟ್ಬಾಲ್ ತಾರೆ ಮೆಸ್ಸಿ, 20 ನಿಮಿಷಗಳಲ್ಲಿ ನಿರ್ಗಮಿಸುತ್ತಿದ್ದಂತೆ ಪ್ರೇಕ್ಷಕರು ಕೋಪಗೊಂಡರು 15,000 ರೂ.ಗಳಷ್ಟು ಖರ್ಚು ಮಾಡಿದರೂ ಅವರು ಬೇಗ ಹೊರಟಿದ್ದಕ್ಕೆ ಸಿಟ್ಟಿಗೆದ್ದರು. ಗಲಭೆ ನಡೆಸಿದ ಪ್ರೇಕ್ಷಕರು ಸಾಲ್ಟ್ ಲೇಕ್ ಕ್ರೀಡಾಂಗಣವನ್ನು ಧ್ವಂಸ ಮಾಡಿದರು. ಇದರಿಂದ ಕ್ರೀಡಾಂಗಣ ಅಸ್ತವ್ಯಸ್ತಗೊಂಡಿತು. ಮೆಸ್ಸಿಯನ್ನು ರಾಜಕಾರಣಿಗಳ ಗುಂಪು ಸುತ್ತುವರೆದಿತ್ತು. ತಾವು ದುಬಾರಿ ಮೊತ್ತ ಪಾವತಿಸಿದರೂ ತಮ್ಮ ನೆಚ್ಚಿನ ತಾರೆಯನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ. ಫುಟ್ಬಾಲ್ ಐಕಾನ್ ಅನ್ನು ನೋಡಲು ಸಾಧ್ಯವಾಗದ ಕಾರಣ ನಿರಾಶೆಗೊಂಡ ಪ್ರೇಕ್ಷಕರು ಬಾಟಲಿಗಳನ್ನು ಎಸೆದು, ಕ್ರೀಡಾಂಗಣದ ಆಸನಗಳನ್ನು ಹರಿದು ಹಾಕಿದರು. ಅಸ್ತವ್ಯಸ್ತವಾಗಿರುವ ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬೇಗನೆ ಹರಡಿತು.

Leave a Reply

Your email address will not be published. Required fields are marked *

error: Content is protected !!