
ಉದಯವಾಹಿನಿ, ನವದೆಹಲಿ: ಲಡಾಖ್‍ನ ಲೇಹ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಸೇನಾ ವಾಹನ ಆಯಾ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿಬಿದ್ದು, ಒಂಬತ್ತು ಮಂದಿ ಸೈನಿಕರು ಸಾವನ್ನಪ್ಪಿ, ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ದಕ್ಷಿಣ ಲಡಾಖ್‍ನ ನ್ಯೋಮಾದ ಕಿಯಾರಿ ಬಳಿ 10 ಸಿಬ್ಬಂದಿಗಳಿದ್ದ ಸೇನಾ ವಾಹನವು ನ್ಯೋಮಾಗೆ ತೆರಳುತ್ತಿದ್ದಾಗ ಅದರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಮರಿಗೆ ಉರುಳಿಬಿದ್ದು ಈ ದುರಂತ ಸಂಭವಿಸಿದೆ ಎಂದು ಎಸ್‍ಎಸ್‍ಪಿ ನಿತ್ಯಾ ತಿಳಿಸಿದ್ದಾರೆ.
ಗಾಯಗೊಂಡ ಎಲ್ಲಾ ಸೈನಿಕರನ್ನು ಸೇನಾ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಎಂಟು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ನಂತರ ಮತ್ತೊಬ್ಬ ಯೋಧ ಸಾವನ್ನಪ್ಪಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ. ಇನ್ನು ಓರ್ವ ಜವಾನ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಲಡಾಕ್‍ನ ಲೇಹ್ ಬಳಿ ಅಪಘಾತದಿಂದಾಗಿ ಭಾರತೀಯ ಸೇನೆ ತನ್ನ 9 ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ನಮ್ಮ ದೇಶಕ್ಕೆ ಅವರ ಅನುಕರಣೀಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳು, ಗಾಯಗೊಂಡ ಸಿಬ್ಬಂದಿಯನ್ನು ಫೀಲ್ಡ ಆಸ್ಪತ್ರೆಗೆ ರವಾನಿಸಲಾಗಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇವೆ ಎಂದು ರಕ್ಷಣಾ ಸಚಿವ ರಾಜಾನಾಥ್‍ಸಿಂಗ್ ಎಕ್ಸ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಸ್ತೆ ಅಪಘಾತದಿಂದ ತೀವ್ರ ದುಃಖವಾಗಿದೆ ಎಂದಿದ್ದಾರೆ.
