ಉದಯವಾಹಿನಿ, ಸಿಂಗಾಪುರ: ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿ ಚುನಾಯಿತರಾದ ಥರ್ಮನ್ ಷಣ್ಮುಗರತ್ನಂ ಅವರು ಒಬ್ಬ ಖ್ಯಾತ ಅರ್ಥಶಾಸ್ತ್ರಜ್ಞ.
ಮುಂದಿನ ಆರು ವರ್ಷಗಳ ಕಾಲ ಸಿಂಗಾಪುರದ ಅಧ್ಯಕ್ಷರಾಗಿ ಆಯ್ಕೆಯಾದ ಮೂರನೇ ಭಾರತೀಯ ಮೂಲದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ (66) ಅವರು ಸಿಂಗಾಪುರ ಅಧ್ಯಕ್ಷೀಯ ಚುನಾವಣಾ ಫಲಿತಾಂಶದಲ್ಲಿ ಜಯಗಳಿಸಿದ್ದಾರೆ. ಶುಕ್ರವಾರ ಬಹಿರಂಗಗೊಂಡ ಚುನಾವಣಾ ಫಲಿತಾಂಶದಲ್ಲಿ ಅವರು ಶೇ.70ಕ್ಕೂ ಹೆಚ್ಚು ಮತಗಳನ್ನು ಪಡೆದಿರುವುದು ಗಮನಾರ್ಹ. ಚಲಾವಣೆಯಾದ 20,48,000 ಮತಗಳ ಪೈಕಿ, ಶೇ.70.4 (17,46,427) ಮತಗಳು ಮಾಜಿ ಸಚಿವ ಷಣ್ಮುಗರತ್ನಂ ಅವರಿಗೆ ಬಿದ್ದಿವೆ.
ಚುನಾವಣಾ ವಿಭಾಗದ ಪ್ರಕಾರ, ಅವರ ಎದುರಾಳಿಗಳಾದ ಚೈನಾ ಮೂಲದ ಅಭ್ಯರ್ಥಿಗಳಾದ ಎನ್‌ಜಿ ಕಾಕ್ ಸಾಂಗ್ ಮತ್ತು ತಾನ್ ಕಿನ್ ಲಿಯಾನ್ ಅವರು ಕ್ರಮವಾಗಿ ಶೇ.15.72 ಮತ್ತು ಶೇ.13.88 ಮತಗಳನ್ನು ಪಡೆದರು. ಚುನಾವಣಾಧಿಕಾರಿ ಪ್ರಕಟಿಸಿದ ಈ ಫಲಿತಾಂಶಗಳೊಂದಿಗೆ, ಸಿಂಗಾಪುರದ ಭಾರತೀಯ ಮೂಲದ ಮೂರನೇ ಅಧ್ಯಕ್ಷರಾಗಿ ಷಣ್ಮುಗರತ್ನಂ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. ಪ್ರಧಾನಿ ಲೀ ಸೀನ್ ಲೂಂಗ್ ನೇತೃತ್ವದ ಪೀಪಲ್ಸ್ ಆಯಕ್ಷನ್ ಪಾರ್ಟಿ (ಪಿಎಪಿ) ಈ ಚುನಾವಣೆಯಲ್ಲಿ ಷಣ್ಮುಗರತ್ನಂ ಅವರ ಪರವಾಗಿ ನಿಂತಿತು. ಈ ಹಿಂದೆ ಭಾರತೀಯ ಮೂಲದ ಎಸ್.ರಾಮನಾಥನ್ ಮತ್ತು ದೇವನ್ ನಾಯರ್ ಸಿಂಗಾಪುರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
