ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದಾದ್ಯಂತ ಕೋವಿಡ್ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಒಂದೇ ವಾರದಲ್ಲಿ ಶೇ 19ರಷ್ಟು ಹೆಚ್ಚಿದ್ದು, ಸಾವಿನ ಪ್ರಮಾಣ ಶೇ 21ರಷ್ಟಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಿಡಿಸಿ) ಇತ್ತೀಚಿನ ದತ್ತಾಂಶದ ಪ್ರಕಾರ ಕೋವಿಡ್ನಿಂದ ವಾರದಲ್ಲಿ ಆಸ್ಪತ್ರೆಗೆ ದಾಖಲಾದವರ ಪ್ರಮಾಣ 10,000ಕ್ಕೂ ಹೆಚ್ಚಿದೆ ಎಂದು ಎನ್ಪಿಆರ್ ವರದಿ ಮಾಡಿದೆ.
ಕೋವಿಡ್ ಪ್ರಕರಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಶಾಲೆ, ಆಸ್ಪತ್ರೆ ಮತ್ತು ಉದ್ಯಮ ಸ್ಥಳ ಸೇರಿದಂತೆ ಅಗತ್ಯ ಪ್ರದೇಶಗಳಲ್ಲಿ ಜನರಿಗೆ ಮತ್ತೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಸಿಡಿಸಿ ನಿರ್ದೇಶಕ ಮಂಡಿ ಕೊಹೆನ್, ಲಸಿಕೆ ಪಡೆಯದವರಿಗೆ ಕೋವಿಡ್ ಇಂದಿಗೂ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದ್ದಾರೆ. ಆಸ್ಪತ್ರೆಗೆ ದಾಖಲಾದವರಲ್ಲಿ ಶೇ 70ರಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
