ಉದಯವಾಹಿನಿ,ಮುಂಬೈ : ಬಾಲಿವುಡ್ ಬಾದಶಾ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ’ಜವಾನ್’ ಇಂದು ಅದ್ಧೂರಿಯಾಗಿ ತೆರೆಕಂಡಿದೆ.ಶಾರುಖ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಎಸ್‌ಆರ್‌ಕೆ ಅವರ ಆಕ್ಷನ್ ಥ್ರಿಲ್ಲರ್‌ನ ಮುಂಗಡ ಟಿಕೆಟ್ ಬುಕಿಂಗ್ ಅನ್ನು ಪರಿಗಣಿಸಿದರೆ, ಹಿಂದಿ ಚಿತ್ರವೊಂದು ಅತ್ಯಧಿಕ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ. ಮೊದಲ ದಿನವೇ ಚಿತ್ರ ವೀಕ್ಷಿಸಲು ಚಿತ್ರ ಪ್ರೇಮಿಗಳು ಬಿರುಗಾಳಿ ವೇಗದಲ್ಲಿ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ.
ಶಾರುಖ್ ಟ್ವೀಟ್: ಶಾರುಖ್ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ. ಇದನ್ನು ನೋಡಿದ ಶಾರುಖ್ ಖಾನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯನ್ನು ಬಳಸಿಕೊಂಡರು.
ಅಭಿಮಾನಿಗಳು ’ಜವಾನ್’ ಅನ್ನು ಆಚರಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡ ನಟ, “ಲವ್ ಯು ಅಭಿಮಾನಿಗಳೇ ನೀವು ಈ ಮನರಂಜನೆಯನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವೆಲ್ಲರೂ ಥಿಯೇಟರ್‌ಗೆ ಹೋಗುವುದನ್ನು ನೋಡಲು ನಾನು ಎಚ್ಚರವಾಗಿದ್ದೆ. ನಿಮ್ಮ ಅಪಾರ ಪ್ರೀತಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಥಿಯೇಟರ್ ಮುಂದೆ ಸಂಭ್ರಮ: ಜವಾನ್ ಕ್ರೇಜ್ ದೇಶ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಹೆಚ್ಚಾಗಿದೆ. ಪಠಾಣ್ ನಂತರ ಶಾರುಕ್ ಅವರ ಮುಂದಿನ ಚಿತ್ರವನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಶಾರುಖ್ ಖಾನ್ ಅವರನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ದೇಶದ ಹಲವೆಡೆ ಬೆಳಗ್ಗೆ ೬ ಗಂಟೆಯಿಂದಲೇ ಮೊದಲ ಶೋಗೆ ಚಿತ್ರಪ್ರೇಮಿಗಳು ಥಿಯೇಟರ್ ತಲುಪಿದ ದೃಶ್ಯಗಳು ಕಂಡು ಬಂದವು.
