ಉದಯವಾಹಿನಿ, ಖಾರ್ತೊಮ್ : ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಸೂಚನೆಗಳು ಲಭಿಸುತ್ತಿಲ್ಲ. ಇದೀಗ ಖಾರ್ತೊಮ್‌ನ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ಭೀಕರ ವಾಯುದಾಳಿಯ ಪರಿಣಾಮ ಕನಿಷ್ಠ ೩೫ ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಳೆದ ಎಪ್ರಿಲ್‌ನಿಂದ ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೇನಾಪಡೆಯ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ಕಮಾಂಡರ್ ಜನರಲ್ ಮುಹಮ್ಮದ್ ಹಮ್ದಾನ್ ದಗಾಲೊ ನಡುವಿನ ಕಲಹದಿಂದಾಗಿ ಖಾರ್ತೊಮ್ ಅಕ್ಷರಶಃ ನರಕದಂತಾಗಿ ಬಿಟ್ಟಿದೆ. ದಿನಂಪ್ರತಿ ಎಂಬಂತೆ ಇಲ್ಲಿ ದಾಳಿ ಸಹಜವಾಗುತ್ತಿದ್ದು, ಅಮಾಯಕ ನಾಗರಿಕರು ಮೃತಪಡುತ್ತಿದ್ದಾರೆ. ಸದ್ಯ ಖಾರ್ತೊಮ್‌ನಲ್ಲಿ ಮಿಲಿಟರಿಗೆ ಪಡೆಗೆ ಸೇರಿದ ಯುದ್ದ ವಿಮಾನವು ಇಲ್ಲಿನ ಮಾರುಕಟ್ಟೆಗಳ ಮೇಲೆ ಭೀಕರ ದಾಳಿ ನಡೆಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ಸೇನೆ ಹಾಗೂ ಅರೆಸೇನಾಪಡೆ ನಡುವಿನ ಕಲಹದಿಂದಾಗಿ ೫೦ ಲಕ್ಷಕ್ಕೂ ಅಧಿಕ ನಾಗರಿಕರು ಖಾರ್ತೊಮ್ ಮತ್ತು ಡಾರ್ಫೂರ್‌ನ ಪಶ್ಚಿಮ ಪ್ರದೇಶಗಳನ್ನು ಬಿಟ್ಟು ಸುರಕ್ಷಿತ ಪ್ರದೇಶಗಳತ್ತ ತೆರಳಿದ್ದಾರೆ. ಅದೂ ಅಲ್ಲದೆ ಈಗಾಗಲೇ ೫ ಸಾವಿರಕ್ಕೂ ಅಧಿಕ ಮಂದಿ ವಿವಿಧ ದಾಳಿ ಹಾಗೂ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ. ಸದ್ಯ ಆರ್‌ಎಸ್‌ಎಫ್ ಪಡೆಯು ಖಾರ್ತೊಮ್ ಮತ್ತು ನೆರೆಯ ನಗರಗಳಾದ ಒಮ್ದುರ್ಮನ್ ಮತ್ತು ಬಹ್ರಿಯನ್ನು ನಿಯಂತ್ರಿಸುತ್ತಿದೆ. ಸದ್ಯ ಖಾರ್ತೊಮ್ ಪ್ರಮುಖ ಆರ್ಥಿಕ ಕೇಂದ್ರ ಕೂಡ ಆಗಿದ್ದು, ಇದರ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಮಿಲಿಟರಿಗೆ ಸೇರಿದ ಯುದ್ದ ವಿಮಾನವು ಭೀಕರ ದಾಳಿ ನಡೆಸಿದೆ. ಇನ್ನು ಒಂದು ವಾರದ ಮುನ್ನ ನಡೆದ ವಾಯುದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ೨೦ ಮಂದಿ ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!