ಉದಯವಾಹಿನಿ, ಬೆಂಗಳೂರು: ಬಿಬಿಎಂಪಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೂಪ್ ಡಿ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ರಾಸಾಯನಿಕಗಳನ್ನು ನಿರ್ವಹಿಸುತ್ತಿದ್ದ ಗ್ರೂಪ್ ಡಿ ಕೆಲಸಗಾರನಿಂದ ತಪ್ಪಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕೇಂದ್ರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತನ ನಿರ್ಲಕ್ಷ್ಯವೇ ಅಗ್ನಿ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.ಆದರೆ, ಹಿರಿಯರ ಸೂಚನೆ ಮೇರೆಗೆ ಈ ಕೆಲಸ ನಿರ್ವಹಿಸಿದ್ದೇನೆ ಎಂದು ಸಿಬ್ಬಂದಿ ಸಮರ್ಥಿಸಿಕೊಂಡಿದ್ದಾರೆ. ಗಾಯಾಳು ಸಿಬ್ಬಂದಿ ಸಂಪೂರ್ಣ ಚೇತರಿಸಿಕೊಂಡ ನಂತರ ಅವರ ಹೇಳಿಕೆಯನ್ನು ಪಡೆದು ವರದಿಗೆ ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ, ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರ ವರದಿಯಲ್ಲಿಯೂ ಪ್ರಯೋಗಾಲಯದ ನೆಲ ಮಹಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ನಿರ್ಲಕ್ಷ್ಯವು ಅಗ್ನಿ ದುರಂತಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂಬುದಾಗಿ ಇಂಜಿನಿಯರಿಂಗ್ ವಿಭಾಗದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಬಿಎಂಪಿ ತನ್ನ ವರದಿಯನ್ನು ಸೆಪ್ಟೆಂಬರ್ ೧೫ ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಡಿ ಗ್ರೂಪ್ ಕೆಲಸಗಾರನ ನಿರ್ಲಕ್ಷ್ಯದ ಕಾರಣ ಬೆಂಕಿ ಅನಾಹುತಕ್ಕೆ ಕಾರಣವಾಗಿದೆ ಎಂದು ಬಿಬಿಎಂಪಿಯ ಆಂತರಿಕ ವಿಚಾರಣೆ ಕೂಡ ವರದಿ ಸಲ್ಲಿಸಿದೆ ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.
