ಉದಯವಾಹಿನಿ, ಇತ್ತ ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಆಡುತ್ತಿದ್ದರೆ ಅತ್ತ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ಭಾರತದ ವೇಗದ ಬೌಲರ್ ಜಯ್‌ದೇವ್ ಉನಾದ್ಕಟ್ ಅಬ್ಬರದ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಎಡಗೈ ವೇಗದ ಬೌಲರ್ ಜಯ್‌ದೇವ್ ಉನಾದ್ಕಟ್ ಸಸ್ಸೆಕ್ಸ್ ಪರವಾಗಿ ಕಣಕ್ಕಿಳಿಯುತ್ತಿದ್ದು 6 ವಿಕೆಟ್‌ಗಳ ಗೊಂಚಲಿನ ಜೊತೆಗೆ 9 ವಿಕೆಟ್ ಕಬಳಿಸಿ ಅಬ್ಬರಿಸಿದ್ದಾರೆ.
ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಶನ್ 2ನ ಲುಸೆಸ್ಟರ್ಶೈರ್ ವಿರುದ್ಧ ರೋಚಕವಾಗಿ ಅಂತ್ಯವಾದ ಪಂದ್ಯದಲ್ಲಿ ಭಾರತದ ಈ ವೃಗದ ಬೌಲರ್ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಭಾರತದ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ ನಾಯಕತ್ವದ ಸಸ್ಸೆಕ್ಸ್ ತಂಡದ ಪರವಾಗಿ ಪದಾರ್ಪಣಾ ಪಂದ್ಯದಲ್ಲಿಯೇ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ ಉನಾದ್ಕಟ್.
ಈ ಪಂದ್ಯದಲ್ಲಿ ಭಾರತದ ಎಡಗೈ ವೇಗದ ಬೌಲರ್ ದ್ವಿತಿಯ ಇನ್ನಿಂಗ್ಸ್‌ನಲ್ಲಿ 32.4 ಓವರ್‌ಗಳ ಬೌಲಿಂಗ್ ದಾಳಿ ನಡೆಸಿ 6 ವಿಕೆಟ್‌ಗಳನ್ನು ಕಬಳಿಸಿದರು. ಅದರಲ್ಲೂ ತಂಡ ಇನ್ನೇನು ಸೋಲಿನತ್ತ ಮುಖ ಮಾಡುತ್ತಿದೆ ಎನ್ನುವಾಗ ಉನಾದ್ಕಟ್ ನೀಡಿದ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಸಸ್ಸೆಕ್ಸ್ ತಂಡ ಈ ಪಂದ್ಯದಲ್ಲಿ ಅದ್ಭಯತವಾಗಿ ಕಮ್‌ಬ್ಯಾಕ್ ಮಾಡಿ ರೋಚಕ 15 ರನ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ.
ಸಸ್ಸೆಕ್ಸ್ ತಂಡ ನೀಡಿದ್ದ 498 ರನ್‌ಗಳ ಗುರಿಯನ್ನು ದಿಟ್ಟವಾಗಿಯೇ ಬೆನ್ನಟ್ಟಿದ ಲುಸೆಸ್ಟರ್ಶೈರ್‌ಗೆ 7ನೇ ವಿಕೆಟ್‌ಗೆ ಜೊತೆಯಾದ ಬೆನ್ ಕಾಕ್ಸ್ ಹಾಗೂ ಟಾಮ್ ಸ್ಕ್ರೀವನ್ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು. ಆದರೆ ಈ ಜೋಡಿ 120 ರನ್‌ಗಳ ಜೊತೆಯಾಟ ನಡೆಸಿದ್ದಾಗ ಉನಾದ್ಕರ್ ಪೂಜಾರ ಪಡೆಗೆ ದೊಡ್ಡ ಮೇಲುಗೈ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವ ಮುನ್ನ ಲುಸೆಸ್ಟರ್ ಶೈರ್ 453 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಹಂದು ಹಂತದಲ್ಲಿ ಸುಸ್ಥತಿತಿಯಲ್ಲಿಯೇ ಇತ್ತು.
ಆದರೆ ಈ ಜೋಡಿಯನ್ನು ಬೇರ್ಪಡಿಸಿದ್ದಲ್ಲದೆ ನಂತರ ಅಬ್ಬರದ ಬೌಲಿಂಗ್ ನಡೆಸಿದ ಉನಾದ್ಕಟ್ ಎದುರಾಳಿ ತಂಡವನ್ನು 483 ರನ್‌ಗಳಿಗೆ ಆಲೌಟ್ ಆಗುವಂತೆ ಮಾಡಿದರು. ಅದರಲ್ಲೂ ಕೊನೆಯ ನಾಲ್ಕು ವಿಕೆಟ್‌ಗಳನ್ನು ಭಾರತದ ಎಡಗೈ ವೇಗಿ ಕೇವಲ 31 ಎಸೆತಗಳಲ್ಲಿ ಕಬಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.
