ಉದಯವಾಹಿನಿ, ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ಶ್ರೀರವಿಶಂಕರ ಗುರೂಜಿ ನೇತೃತ್ವದ ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಶ ನೈಸರ್ಗಿಕ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಡಿಸೆಂಬರ್ ೯, ೧೦ ಹಾಗೂ ೧೧ ರಂದು ೩ ದಿನಗಳ ವಿಶ್ವ ಸಿರಿಧಾನ್ಯಗಳ ಸಾವಯವ ಮತ್ತು ನೈಸರ್ಗಿಕ ಕೃಷಿ ಮೇಳ ಹಾಗೂ ಕೃಷಿ ವಸ್ತು ಪ್ರದರ್ಶನವು ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ಎಸ್. ವಿ. ಸುರೇಶ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯಕರ ಜೀವನವನ್ನು ವೃದ್ಧಿಸಲು ಮೀಸಲಾಗಿರುವ ಈ ಜಾಗತಿಕ ಕೃಷಿ ಮೇಳ ಒಂದು ಅಭೂತಪೂರ್ವ ಸಾವಯವ ಮತ್ತು ನೈಸರ್ಗಿಕ ಕೃಷಿ ವಿಕಾಸ ಚಿಂತನೆಯ ಸಮಾವೇಶವಾಗಿ ಮೂಡಿಬರಲಿದೆ ಎಂದರು. ಸಮಾವೇಶದಲ್ಲಿ ನೈಜ ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಗುಣಾತ್ಮಕ ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಕುರಿತು ವಿಸ್ತೃತ ವಿಚಾರ ಮಂಥನ ನಡೆಯಲಿದೆ. ಈ ವಿಚಾರ ಮಂಥನದಲ್ಲಿ ಪಾಲ್ಗೊಳ್ಳುವ ಹಲವಾರು ಸಾವಯವ ಕೃಷಿ ತಜ್ಞರು ರೈತರ ಸಮಸ್ಯೆ-ಸವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿ ವಿಶೇಷವಾಗಿ ಸಿರಿಧಾನ್ಯಗಳ, ಸಾವಯವ ಮತ್ತು ನೈಸರ್ಗಿಕ ಕೃಷಿ ಸಂವರ್ಧನೆಗೆ ಪೂರಕ ಸಲಹೆಗಳನ್ನು ನೀಡಲಿದ್ದಾರೆ ಎಂದರು.
