ಉದಯವಾಹಿನಿ, ಬಹುತೇಕ ಸಿನಿಮಾಗಳಲ್ಲಿ ಅದರಲ್ಲೂ ನಾಯಕಿ ಪಾತ್ರ ನಾಯಕನ ಜೊತೆ ಹಾಡು-ಡ್ಯಾನ್ಸ್ ಮಾಡಲು, ಅವನೊಂದಿಗೆ ರೊಮ್ಯಾನ್ಸ್ ಮಾಡಲು ಮಾತ್ರವೇ ಸೀಮಿತ. ಆ ಮೇಲೆ ದಕ್ಷಿಣದ ಕೆಲವು ನಿರ್ದೇಶಕರು, ನಾಯಕಿ ಪಾತ್ರವನ್ನು ಹಾಸ್ಯ ದೃಶ್ಯಗಳಿಗೂ ಬಳಸಿಕೊಳ್ಳಲು ಆರಂಭಿಸಿದರು. ಇದು ತೆಲುಗು, ತಮಿಳಿನಲ್ಲಂತೂ ಬಹಳ ಚೆನ್ನಾಗಿ ವರ್ಕೌಟ್ ಆಗಿತ್ತು. ಆದರೆ ಕೆಲ ನಟಿಯರು ತಾವು ಹಾಸ್ಯ ನಟರುಗಳೊಟ್ಟಿಗೆ ನಟಿಸಲು ಒಲ್ಲೆ ಎಂದಿದ್ದರಂತೆ. ಖ್ಯಾತ ನಟಿಯೊಬ್ಬರಂತೂ ನಟನ ಬಣ್ಣ, ಹಿನ್ನೆಲೆಯ ಕಾರಣಕ್ಕೆ ಆತನೊಟ್ಟಿಗೆ ನಟಿಸುವುದಕ್ಕೆ ಒಲ್ಲೆ ಎಂದು ದರ್ಪ ಪ್ರದರ್ಶಿಸಿದ್ದರಂತೆ.
ಕಲಾಭವನ್ ಮಣಿ ತಮಿಳಿನ ಅತ್ಯುತ್ತಮ ನಟ. ತಮಿಳು ಮಾತ್ರವಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಮಣಿ ದಕ್ಷಿಣ ಭಾರತದ ಅತ್ಯುತ್ತಮ ವಿಲನ್, ಹಾಸ್ಯ ನಟ ಸಹ ಆಗಿದ್ದರು. ಅವರ ನಟನೆ ಮೆಚ್ಚದ ಸಿನಿಮಾ ಪ್ರೇಮಿಗಳು ಬಹಳ ವಿರಳ. ಕಲಾಭವನ್ ಮಣಿ, ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು. ಕಪ್ಪು ಮೈಬಣ್ಣ, ತುಸು ದಪ್ಪ ದೇಹ. ಆದರೆ ನಟನೆ ಮಾತ್ರ ಅತ್ಯುತ್ತಮ.
ಕನ್ನಡದ ‘ಬಾನಲ್ಲೂ ನೀನೆ ಭುವಿಯಲ್ಲು ನೀನೆ’ ಸಿನಿಮಾ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ದಿವ್ಯಾ ಉನ್ನಿ 90 ಮತ್ತು 2000 ದಶಕದಲ್ಲಿ ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿ ಆಗಿದ್ದರು. ಮಲಯಾಳಂ ಮೂಲಕ ನಟಿಯಾಗಿದ್ದ ದಿವ್ಯಾ ಉನ್ನಿ, ತೆಲುಗು, ತಮಿಳಿನಲ್ಲೂ ಭಾರಿ ಬೇಡಿಕೆ ಹೊಂದಿದ್ದರು. ಆದರೆ ಸಿನಿಮಾ ಒಂದರಲ್ಲಿ ಅವರು ಕಲಾಭವನ್ ಮಣಿ ಜೊತೆಗೆ ಸೀನ್ ಒಂದರಲ್ಲಿ ನಟಿಸಲು ನಿರಾಕರಿಸಿದ್ದರಂತೆ.
ಹಾಸ್ಯ ದೃಶ್ಯಕ್ಕಾಗಿ ಕಲಾಭವನ್ ಮಣಿ ಜೊತೆ ದಿವ್ಯಾ ಉನ್ನಿ ರೊಮ್ಯಾನ್ಸ್ ಮಾಡುವಂತೆ ನಟಿಸಬೇಕಿತ್ತಂತೆ. ಆದರೆ ನಟನ ಬಣ್ಣ, ಹಿನ್ನೆಲೆಯ ಕಾರಣಕ್ಕೆ ಮಣಿ ಜೊತೆಗೆ ನಟಿಸಲಿಲ್ಲವಂತೆ ದಿವ್ಯಾ. ಇದರಿಂದ ಕಲಾಭವನ್ ಮಣಿಗೆ ಸಾಕಷ್ಟು ಬೇಸರ ಉಂಟಾಗಿತ್ತಂತೆ. ಆದರೆ ಕೆಲ ವರ್ಷಗಳ ಬಳಿಕ ಕಲಾಭವನ್ ಮಣಿ ತಮ್ಮ ಪ್ರತಿಭೆಯಿಂದ ದಕ್ಷಿಣ ಭಾರತದ ಜನಪ್ರಿಯ ವಿಲನ್ ಮತ್ತು ಹಾಸ್ಯ ನಟರಾದರು. ರಜನೀಕಾಂತ್ ನಟನೆಯ ‘ರೋಬೊ’ ಸಿನಿಮಾನಲ್ಲಿ ನಟಿ ಐಶ್ವರ್ಯಾ ರೈ, ಅದೇ ಕಲಾಭವನ್ ಮಣಿ ಜೊತೆಗೆ ತುಸು ರೊಮ್ಯಾಂಟಿಕ್ ಎನ್ನಬಹುದಾದ ಹಾಸ್ಯ ಪಾತ್ರದಲ್ಲಿ ನಟಿಸಿದರು.
ಐಶ್ವರ್ಯಾ ರೈಗೆ ಪಾತ್ರ ಸನ್ನಿವೇಶ ಮುಖ್ಯವಾಗಿತ್ತು, ಅವರು ಕಲಾಭವನ್ ಮಣಿಯ ಮೈಬಣ್ಣ, ಸಾಮಾಜಿಕ ಹಿನ್ನೆಲೆಯನ್ನು ನೋಡಲಿಲ್ಲ. ಆ ನಂತರ ಹಲವು ನಟಿಯರೊಟ್ಟಿಗೆ ಕಲಾಭವನ್ ಮಣಿ ಆತ್ಮೀಯವಾಗಿ ನಟಿಸಿದರು. ಶ್ರೆಯಾ ಸಿರಿನ್ ಜೊತೆಗೆ ‘ಅರ್ಜುನ್’ ಸಿನಿಮಾನಲ್ಲಿಯೂ ರೊಮ್ಯಾಂಟಿಕ್ ಹಾಸ್ಯ ದೃಶ್ಯಗಳಲ್ಲಿ ನಟಿಸಿದರು. ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. 2016 ರಲ್ಲಿ ಕಲಾಭವನ್ ಮಣಿ, ಅನಾರೋಗ್ಯದ ಕಾರಣಕ್ಕೆ ನಿಧನ ಹೊಂದಿದರು.
