ಉದಯವಾಹಿನಿ, ಲಖನೌ : ಅಕ್ರಮ ಕ್ಲಿನಿಕ್ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಸೋದರಳಿಯನ ಜತೆ ಸೇರಿ ಮಹಿಳೆಯೊಬ್ಬಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಯೂಟ್ಯೂಬ್ ವಿಡಿಯೊ ಟ್ಯುಟೋರಿಯಲ್ ನೋಡಿ ಸರ್ಜರಿ ಮಾಡಿದ ಪರಿಣಾಮ ಮಹಿಳೆ ಮೃತಪಟ್ಟಿದ್ದಾಳೆ. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದ ಆರೋಪಿಗಳು ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದಿದ್ದರೂ ಶಸ್ತ್ರಚಿಕಿತ್ಸೆಗೆ ನಡೆಸಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ತೆಹಬಹಾದೂರ್ ರಾವತ್ ಎಂಬುವವರ ಪತ್ನಿ ಮುನಿಶ್ರಾ ರಾವತ್ ಕಿಡ್ನಿ ಸ್ಟೋನ್‍ಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಡಿಸೆಂಬರ್ 5ರಂದು ಅವರ ಪತಿ ಅವರನ್ನು ಕೋಠಿಯಲ್ಲಿರುವ ಶ್ರೀ ದಾಮೋದರ್ ಔಷಧಾಲಯಕ್ಕೆ ಕರೆದೊಯ್ದರು. ಅಲ್ಲಿ ಕ್ಲಿನಿಕ್ ಆಪರೇಟರ್ ಜ್ಞಾನ್ ಪ್ರಕಾಶ್ ಮಿಶ್ರಾ ಹೊಟ್ಟೆಯಲ್ಲಿ ನೋವು ಕಲ್ಲುಗಳಿಂದ ಉಂಟಾಗಿದೆ ಎಂದು ಹೇಳಿ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ ಎನ್ನಲಾಗಿದೆ.
ಈ ಶಸ್ತ್ರಚಿಕಿತ್ಸೆಗೆ 25,000 ರೂ. ವೆಚ್ಚವಾಗುತ್ತದೆ ಎಂದು ಅವರು ಹೇಳಿದ್ದಾನೆ. ಶಸ್ತ್ರಚಿಕಿತ್ಸೆಗೆ ಮುನ್ನ ಪತಿ 20,000 ರೂ. ಠೇವಣಿ ಇಟ್ಟಿದ್ದರು. ಮದ್ಯ ಕುಡಿದಿದ್ದ ಮಿಶ್ರಾ ಯೂಟ್ಯೂಬ್ ವಿಡಿಯೊ ನೋಡಿ ಶಸ್ತ್ರಚಿಕಿತ್ಸೆ ಆರಂಭಿಸಿದ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಮಿಶ್ರಾ, ತನ್ನ ಪತ್ನಿಯ ಹೊಟ್ಟೆಯನ್ನು ಕೊಯ್ದು, ಹಲವು ರಕ್ತನಾಳಗಳನ್ನು ಕತ್ತರಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಡಿಸೆಂಬರ್ 6ರಂದು ಸಂಜೆ ಪತ್ನಿ ಮೃತಪಟ್ಟಿದ್ದಾಗಿ ಅವರು ಹೇಳಿದ್ದಾರೆ. ಮಿಶ್ರಾ ಸೋದರಳಿಯ ವಿವೇಕ್ ಕುಮಾರ್ ಮಿಶ್ರಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಹಾಯ ಮಾಡಿದ್ದ. ಸೋದರಳಿಯ ರಾಯ್‌ಬರೇಲಿಯ ಆಯುರ್ವೇದ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದು, ಸರ್ಕಾರಿ ಕೆಲಸದ ನೆಪದಲ್ಲಿ ಅಕ್ರಮ ಕ್ಲಿನಿಕ್ ಅನ್ನು ಹಲವು ವರ್ಷಗಳಿಂದ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
