ಉದಯವಾಹಿನಿ, ಲಖನೌ : ಮದುವೆ ಸಮಾರಂಭಕ್ಕೆ ಸ್ವಲ್ಪ ಮೊದಲು ವರನೊಬ್ಬ ಕಾರು ಮತ್ತು 20 ಲಕ್ಷ ರೂ. ವರದಕ್ಷಿಣೆ ಗೆ ಬೇಡಿಕೆ ಇಟ್ಟ ಕಾರಣಕ್ಕೆ ವಿವಾಹವೇ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸಂತೋಷ, ಸಡಗರದಿಂದ ನೆರವೇರಬೇಕಿದ್ದ ಸಮಾರಂಭವು, ದುಃಸ್ವಪ್ನವಾಗಿ ಪರಿಣಮಿಸಿತು. ಬ್ರೆಝಾ ಕಾರು ಮತ್ತು ಹಣವನ್ನು ನೀಡುವಂತೆ ವರ ಒತ್ತಾಯಿಸಿದ್ದಾನೆ. ತಮ್ಮ ಬೇಡಿಕೆಯನ್ನು ನೀಡುವವರೆಗೆ ಆಚರಣೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾನೆ. ಕೊನೆಯ ಕ್ಷಣದ ಬೇಡಿಕೆಯು ಗೊಂದಲಕ್ಕೆ ಕಾರಣವಾಯಿತು. ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು.

ತನ್ನ ಕುಟುಂಬ ಸದಸ್ಯರು ಅಸಹಾಯಕರಾಗಿರುವುದನ್ನು ನೋಡಿದ ವಧು ಮದುವೆಯನ್ನು ಮುಂದುವರಿಸಲು ನಿರಾಕರಿಸಿದಳು. ಈ ವರದಕ್ಷಿಣೆ ದುರಾಸೆಯ ಜನರನ್ನು ನಾನು ಮದುವೆಯಾಗಲು ಬಯಸುವುದಿಲ್ಲ. ನನ್ನ ಕುಟುಂಬವನ್ನು ಗೌರವಿಸದ, ನನ್ನ ತಂದೆ ಮತ್ತು ಸಹೋದರನನ್ನು ಎಲ್ಲ ಅತಿಥಿಗಳ ಮುಂದೆ ಅವಮಾನಿಸುವ ಹುಡುಗನೊಂದಿಗೆ ನಾನು ನನ್ನ ಜೀವನವನ್ನು ಕಳೆಯಲು ಸಾಧ್ಯವಿಲ್ಲ. ನಾನು ಈ ದುರಾಸೆಯ ವ್ಯಕ್ತಿಯೊಂದಿಗೆ ವಿವಾಹವಾಗುವುದಿಲ್ಲ ಎಂದು ಹೇಳಿದ್ದಾಳೆ. ಪೊಲೀಸರು ವರ ಮತ್ತು ಆತನ ಸೋದರಮಾವನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ವಧುವಿನ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಮೇಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಧುವಿನ ಕುಟುಂಬ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈ ಖರ್ಚುಗಳ ಜತೆಗೆ, ವರನಿಗೆ ಚಿನ್ನದ ಉಂಗುರ, ಸರ ಮತ್ತು ಐದು ಲಕ್ಷ ರೂಪಾಯಿ ನಗದನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!